ಮಕ್ಕಳಿಗೆ ಅತಿಯಾದ ಸ್ವಾತಂತ್ರ್ಯ ಸರಿಯಲ್ಲ: ಶ್ಯಾಮಲಾ ‌ಕುಂದರ್

ಉಡುಪಿ: ಮಕ್ಕಳಿಗೆ ಅತಿಯಾದ ಸ್ವಾತಂತ್ರ್ಯ ನೀಡಿದ ಪರಿಣಾಮ ಇಂದು ಲಿವಿಂಗ್‌ ರಿಲೇಷನ್ಶಫ್‌, ವಿಚ್ಛೇಧನದಂತಹ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ತಡೆಯುವಲ್ಲಿ ತಾಯಂದಿರ ಪಾತ್ರ ಪ್ರಮುಖವಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್‌ ಹೇಳಿದರು.
ಉಡುಪಿ ತಾಲ್ಲೂಕು ಮಹಿಳಾ ಮಂಡಳಿಗಳ ಒಕ್ಕೂಟ ಹಾಗೂ ಉಡುಪಿ ಬಂಟರ ಸಂಘದ ಸಹಯೋಗದಲ್ಲಿ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಒಂದೇ ಮನೆಯಲ್ಲಿ ವಾಸವಾಗಿದ್ದರೂ ಮೊಬೈಲ್‌ ಮೂಲಕ ಸಂಪರ್ಕಿಸುವ ಸ್ಥಿತಿ ನಿರ್ಮಾಣ ಆಗಿದೆ. ಇದು ಹೀಗೆ ಮುಂದುವರಿದರೆ ಮನುಷ್ಯ ಸಂಬಂಧಗಳು ದೂರ ಆಗುತ್ತವೆ. ಹಾಗಾಗಿ ಮಾನವೀಯ ಸಂಬಂಧಗಳನ್ನು ಉಳಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು.
ನಮ್ಮ ಮಾತೃಪ್ರಧಾನ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗುತ್ತಿದೆ. ಭಾರತೀಯರು ಪ್ರಕೃತಿಯಲ್ಲಿ ಮಾತೆಯರನ್ನು ಕಂಡು ಪೂಜೆಸುವ ಸಂಸ್ಕೃತಿ
ಹೊಂದವರಾಗಿದ್ದಾರೆ. ಮಹಿಳೆ ಇಂದು ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಚಾಪು ಮೂಡಿಸುತ್ತಿದ್ದಾಳೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಽಕಾರಿ ಪ್ರೀತಿ ಗೆಹ್ಲೋಟ್‌ ಮಾತನಾಡಿದರು. ಉಡುಪಿ ತಾಲ್ಲೂಕು ಶಿಶು ಕಲ್ಯಾಣಾಧಿಕಾರಿ ವೀಣಾ, ಬಂಟರ ಸಂಘದ ಅಧ್ಯಕ್ಷ ಜಯರಾಜ್‌ ಹೆಗ್ಡೆ, ಮಹಿಳಾ ಮಂಡಳಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸರಳಾ ಕಾಂಚನ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್‌ ಹಾಗೂ ಪವರ್‌ ಲಿ-ಫ್ಟರ್‌ ಪ್ರತೀಕ್ಷಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಒಕ್ಕೂಟದ ಕುಂದಾಪುರ ತಾಲ್ಲೂಕು ಅಧ್ಯಕ್ಷ ರಾಧಾದಾಸ್‌, ಉಡುಪಿ ತಾಲ್ಲೂಕು ಉಪಾಧ್ಯಕ್ಷರಾದ ಸುಷ್ಮಾ ಎಸ್. ಶೆಟ್ಟಿ, ಸುಪ್ರಭ ಆಚಾರ್ಯ, ಕೋಶಾಧಿಕಾರಿ ಮಮತ ಎಸ್‌. ಶೆಟ್ಟಿ, ಜಂಟಿ ಕಾರ್ಯದರ್ಶಿ ಗೀತಾ ರವಿ ಉಪಸ್ಥಿತರಿದ್ದರು. ಅಧ್ಯಕ್ಷೆ ಶೀಲಾ ಕೆ.
ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಯಶೋಧಾ ಜೆ. ಶೆಟ್ಟಿ ಸ್ವಾಗತಿಸಿದರು.
ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ಕಲೆ ಕಲಿಸಿ:
ಉಡುಪಿ ಸೇರಿದಂತೆ ಹೆಚ್ಚಿನ ಕಡೆಗಳಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆಯ ಸಮಸ್ಯೆ ಎದುರಾಗಿದ್ದು, ಬಸ್‌ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಅವರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಹೆಣ್ಣುಮಕ್ಕಳಿಗೆ ಕರಾಟೆಯಂತಹ ಆತ್ಮರಕ್ಷಣಾ ಕಲೆಗಳನ್ನು ಕಲಿಸಿಕೊಡಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್‌ ಹೇಳಿದರು.