ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ 10ನೇ ಹವಾನಿಯಂತ್ರಿತ ಶಾಖೆ ಮಣಿಪಾಲ ಕಮರ್ಷಿಯಲ್ ಕಾಂಪ್ಲೆಕ್ಸ್ನ ಮೊದಲ ಮಹಡಿಯಲ್ಲಿ ಸೋಮವಾರ ಶುಭಾರಂಭಗೊಂಡಿತು.
ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ, ಸಮಾಜದೊಂದಿಗೆ ಸಂಸ್ಥೆ ಬೆಳೆಯಬೇಕು. ಸಂಸ್ಥೆಯ ಮೂಲಕ ಸಮಾಜ ಬೆಳೆಯಬೇಕು. ಈ ರೀತಿಯ ಪರಸ್ಪರ ಕೊಡುಕೊಳ್ಳುವಿಕೆಯೊಂದಿಗೆ ಸಮಾಜ ಹಾಗೂ ಸಂಸ್ಥೆ ಮುನ್ನಡೆಯಬೇಕು. ಸಾಮಾಜಿಕ ಬದುಕಿನಲ್ಲಿ ಆರ್ಥಿಕ ವ್ಯವಸ್ಥೆಯ ಸ್ಥಾನ ಏನೆಂಬುವುದನ್ನು ನಾವು
ತಿಳಿದುಕೊಂಡಿದ್ದೇವೆ. ಆ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಬಡಗಬೆಟ್ಟು ಸೊಸೈಟಿ ನಿರಂತರವಾಗಿ ಶ್ರೇಯಸ್ಸಿನ ಕಡೆಗೆ ಮುನ್ನಡೆಯಲಿ ಎಂದು ಹಾರೈಸಿದರು.
ಸಹಕಾರ ಮಾರಾಟ ಮಹಾ ಮಂಡಳ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಶಾಖೆ ಉದ್ಘಾಟಿಸಿ ಮಾತನಾಡಿ, ಹದಗೆಟ್ಟಿರುವ ದೇಶದ ಆರ್ಥಿಕ ಪರಿಸ್ಥಿತಿಗೆ ಪುನಶ್ಚೇತನ ನೀಡಬೇಕಾದರೆ ಸಹಕಾರಿ ಕ್ಷೇತ್ರದ ಸಹಕಾರ ಅವಶ್ಯ ಪ್ರಸ್ತುತ ದೇಶದ ಆರ್ಥಿಕ ಪರಿಸ್ಥಿತಿ ಕುಂಠಿತಗೊಂಡಿದ್ದು, ಜನರ ಆದಾಯ ದಿನೇ ದಿನೇ ಕುಸಿಯುತ್ತಿದೆ. ಜನರಿಗೆ ಬ್ಯಾಂಕ್ಗಳಲ್ಲಿ ಪಡೆದ ಸಾಲ ಕಟ್ಟಲು ಆಗುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಹಕಾರಿ ಕ್ಷೇತ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ವ್ಯಕ್ತಿಗೆ ಪುನಶ್ಚೇತನ ನೀಡುವ ಕೆಲಸ ಮಾಡುತ್ತಿದೆ ಎಂದರು.
ಸಹಕಾರಿ ಕ್ಷೇತ್ರ ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪುವ ವ್ಯವಸ್ಥೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದೆ.
ಕಳೆದ 27 ವರ್ಷಗಳಿಂದ ಶೇಕಡ ನೂರಕ್ಕೆ ನೂರರಷ್ಟು ಕೃಷಿ ಸಾಲವನ್ನು ಮರುಪಾವತಿ ಮಾಡಿದ ಹೆಗ್ಗಳಿಕೆ ನಮ್ಮ ಜಿಲ್ಲೆಗೆ ಸಲ್ಲುತ್ತದೆ. ಒಂದು ಸಂಸ್ಥೆ ಬೆಳೆದು ಯಾವ ರೀತಿಯಲ್ಲಿ ಜನರ ಸೇವೆ ಮಾಡಬಹುದು ಎನ್ನುವುದಕ್ಕೆ ಬಡಗಬೆಟ್ಟು ಸೊಸೈಟಿ ಮಾದರಿಯಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಟಿಎಂಎ ಪೈ ಫೌಂಡೇಶನ್ನ ಕಾರ್ಯದರ್ಶಿ ಟಿ. ಅಶೋಕ್ ಪೈ, ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ಮಹಾಪ್ರಬಂಧಕ ರವೀಂದ್ರ ರೈ ಮಾತನಾಡಿದರು.
ಸಹಾಯಕ ಉಪನಿಬಂಧಕಿ ಚಂದ್ರಪ್ರತಿಮಾ, ಲೆಕ್ಕಪರಿಶೋಧಕ ಶ್ರೀರಾಮುಲು ರೆಡ್ಡಿ, ಶತಮಾನೋತ್ಸವ ಸಮಿತಿ ಸಮಿತಿ ಸಂಚಾಲಕ, ನಿರ್ದೇಶಕ ಪುರುಷೋತ್ತಮ್ ಪಿ. ಶೆಟ್ಟಿ, ಉಪಾಧ್ಯಕ್ಷ ಎಲ್. ಉಮಾನಾಥ್ ಉಪಸ್ಥಿತರಿದ್ದರು. ಸೊಸೈಟಿಯ ಅಧ್ಯಕ್ಷ ಸಂಜೀವ ಕಾಂಚನ್ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಬಿ. ಜಯಕರ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.
ಸಹಕಾರಿ ಕ್ಷೇತ್ರ ಬಲಿಷ್ಠವಾಗಿ ಬೆಳೆಯುತ್ತಿದೆ:
ಸಹಕಾರಿ ಬ್ಯಾಂಕ್ಗಳಲ್ಲಿ ಠೇವಣಿ ಇಟ್ಟರೆ ಅದು ನಿಮ್ಮ ಕಾರ್ಯಕ್ಷೇತ್ರದ ಪ್ರತಿಯೊಬ್ಬ
ಸದಸ್ಯನಿಗೆ ಸಿಗುತ್ತದೆಯೇ ಹೊರತು, ಸಾಲ ಪಡೆದು ವಂಚಿಸುವ ನೀರವ್ ಮೋದಿಯಂತಹ
ದೊಡ್ಡದೊಡ್ಡ ಉದ್ಯಮಿಗಳಿಗೆ ನಾವು ಸಾಲ ಕೊಡುವುದಿಲ್ಲ. ಸರಿಯಾಗಿ ಸಾಲ ಮರುಪಾವತಿ ಮಾಡುವ ನಮ್ಮ ಸದಸ್ಯರಿಗೆ ಮಾತ್ರ ಸಾಲ ನೀಡುತ್ತೇವೆ. ಆದ್ದರಿಂದ ಇಂದು ದೇಶದಲ್ಲಿ ಸಹಕಾರಿ ಸಂಸ್ಥೆಗಳು ಬಲಿಷ್ಠವಾಗಿ ಬೆಳೆಯುತ್ತಿದೆ ಎಂದು ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.