ಮಾ.12ರಿಂದ ತೆಂಕಪೇಟೆಯ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ  ಸುತ್ತುಪೌಳಿ ಜೀರ್ಣೋದ್ಧಾರ, ಪುನಃ ಪ್ರತಿಷ್ಠೆ ಮಹೋತ್ಸವ

ಉಡುಪಿ: ತೆಂಕಪೇಟೆಯ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದ ಸುತ್ತು ಪೌಳಿ ಜೀರ್ಣೋದ್ಧಾರ ಮತ್ತು ಪರಿವಾರ ದೇವರುಗಳ ಪುನಃ ಪ್ರತಿಷ್ಠಾ ಮಹೋತ್ಸವ ಮಾರ್ಚ್‌ 12ರಿಂದ 15ರ ವರೆಗೆ ನಡೆಯಲಿದೆ ಎಂದು ದೇಗುಲದ ಆಡಳಿತ ಮೊಕ್ತೇಸರ, ಸುತ್ತು ಪೌಳಿ ಜೀರ್ಣೋದ್ಧಾರ ಸಮಿತ ಕಾರ್ಯಾಧ್ಯಕ್ಷ ಪಿ. ವಿಠಲದಾಸ ಶೆಣೈ ತಿಳಿಸಿದರು.
ಭಾನುವಾರ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 12ರಂದು ಬೆಳಿಗ್ಗೆ 8 ಗಂಟೆಗೆ ಪ್ರಾರ್ಥನೆ, ಗುರುಗಣಪತಿ ಪೂಜನಾ, ಆದ್ಯ ಗಣಯಾಗ, ಕೂಪಶುದ್ಧಿ, ಮೃತ್ತಿಕಾ ಹರಣ, ಮಹಾಪೂಜೆ, ಬ್ರಾಹ್ಮಣ ಸಂತರ್ಪಣೆ ನೆರವೇರಲಿದ್ದು, ಸಂಜೆ 4.30ರಿಂದ ಹೊರೆಕಾಣಿಕೆ ಮೆರವಣಿಗೆ ಜರುಗಲಿದೆ. ಸಂಜೆ 7ಗಂಟೆಗೆ ದೇವರ ಸನ್ನಿಧಿಯಲ್ಲಿ ಮಹಾಪ್ರಾರ್ಥನೆ, ಶಿಲ್ಪಿತೋಷಣ, ಸುತ್ತುಪೌಳಿ ಪರಿಗ್ರಹ, ರಾತ್ರಿ ಪೂಜೆ, ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದರು.
13ರಂದು ಬೆಳಿಗ್ಗೆ 8ಗಂಟೆಗೆ ಪುಣ್ಯಾಹ ವಾಚನ, ಮಾತೃಕಾ ಪೂಜನ, ನಾಂದಿ ಪೂಜನ, ಶ್ರೀದೇವರಿಗೆ ಪಂಚವಿಂಶತಿ ಕಲಶಾಭಿಷೇಕ, ಯಜ್ಞ ಮಂಟಪದಲ್ಲಿ ಪ್ರಾಯಶ್ಚಿತ ಹೋಮ, ಗೋಪೂಜೆ ನಡೆಯಲಿದ್ದು, ಸಂಜೆ 7ಗಂಟೆಗೆ ಶಾಂತಿ ಪಾಠ, ದುರ್ಗಾನಮಸ್ಕಾರ ಪೂಜೆ, ರಾತ್ರಿ ಪೂಜೆ ನೆರವೇರಲಿದೆ. ೧೪ರಂದು ಬೆಳಿಗ್ಗೆ 8 ಗಂಟೆಗೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ
6 ಗಂಟೆಗೆ ದೇವರ ವಿಗ್ರಹಗಳಿಗೆ ಬಾಲಾಲಯದಲ್ಲಿ ಶಯ್ಯಾಧಿವಾಸ ಪೂಜೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅನುವಂಶಿಕ ಟ್ರಸ್ಟಿ ಯು. ನಾರಾಯಣ ಪ್ರಭು, ಗೌರವಾನ್ವಿತ ಉಪಾಧ್ಯಕ್ಷ ಡಾ.ಯು. ಕೈಲಾಸನಾಥ ಶೆಣೈ, ಸಹ ಕಾರ್ಯದರ್ಶಿ ಯು. ಅಶೋಕ ಬಾಳಿಗಾ, ಸಲಹೆ ಸೌಕರ್ಯ ಸಮಿತಿಯ ಯು. ದೇವದಾಸ್ ಪೈ ಇದ್ದರು.