ಬಜೆಟ್ ಅಭಿವೃದ್ಧಿಗೆ ಪೂರಕವಾಗಿದೆ : ಕುಯಿಲಾಡಿ
ಸಿಎಂ ಯಡಿಯೂರಪ್ಪನವರು ಗುರುವಾರ ಮಂಡಿಸಿದ ಬಜೆಟ್ ಅಭಿವೃದ್ಧಿಗೆ ಪೂರಕವಾಗಿದ್ದು, ಎಲ್ಲ ವಲಯಗಳಿಗೂ ಆದ್ಯತೆ ನೀಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯ್ಕ್ ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಗ್ರಾಮೀಣ ಸುಮಾರ್ಗ ಯೋಜನೆ, ಬಂದರುಗಳ ಅಭಿವೃದ್ಧಿ, ಯುವ ಸಬಲೀಕರಣಕ್ಕೆ ಹೊಸ ಯೋಜನೆ ಮತ್ತು ರಾಜ್ಯದ ಎಲ್ಲಾ ಸಮುದಾಯಗಳ ಏಳಿಗೆಗೆ ಅನುಕೂಲ ಮಾಡಿಕೊಡಲಾಗಿದೆ. ಕೃಷಿ ಸಾಲದ ಬಡ್ಡಿ ಮನ್ನಾ, ನೇಕಾರರ ಸಾಲದ ಬಡ್ಡಿ ಮನ್ನಾ ಮತ್ತು ರಾಜೀವ ಗಾಂಧಿ ವಸತಿ ಯೋಜನೆಗೆ ಅಡಮಾನ ವಿನಾಯಿತಿ ನೀಡುವ ಮೂಲಕ ಬಡವರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದಿದ್ದಾರೆ.
ಜಿಲ್ಲೆಗೆ ಜವಳಿ ಪಾರ್ಕ್ ಘೋಷಣೆ ಮಾಡಿದ್ದು, ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸಲಾಗಿದೆ. ಎಸ್.ಸಿ, ಎಸ್.ಟಿ. ಯುವಕರಿಗೆ ಉಚಿತ ವಾಹನ ತರಬೇತಿ, ಅಡಿಕೆ ಬೆಳೆಗಾರರಿಗೆ ಎರಡು ಲಕ್ಷ ಹೊಸ ಸಾಲ ಯೋಜನೆ ಹಾಗೂ ಮೀನುಗಾರ ಮಹಿಳೆಯರಿಗೆ ಸ್ಕೂಟರ್ ಸೌಲಭ್ಯ ನೀಡಿದ್ದು, ಎಲ್ಲಾ ವರ್ಗದ ಜನರನ್ನು ಒಳಗೊಂಡಂತೆ ಜನಪರ ಬಜೆಟ್ ಮಂಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸ್ಪಷ್ಟತೆ ಇಲ್ಲದ ಬಜೆಟ್: ಕೊಡವೂರು
ಬಜೆಟ್‌ನಲ್ಲಿ ಯೋಜನೆಯ ಅನುಷ್ಠಾನಗಳಿಗೆ ವಿಂಗಡಿಸಿದ ಅನುದಾನದ ಬಗ್ಗೆ ಸ್ಪಷ್ಟತೆಯಿಲ್ಲ. ಮುಖ್ಯಮಂತ್ರಿಗಳು ಯಾವುದೇ ಹೊಸ ಯೋಜನೆ ಘೋಷಣೆ ಮಾಡದೆ, ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಿಸಿ ಮಧ್ಯಮ ವರ್ಗದ ಜನರ ಜೇಬಿಗೆ ಕತ್ತರಿ ಹಾಕಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಟೀಕಿಸಿದ್ದಾರೆ.
ಕೃಷಿಗೆ ಹೆಚ್ಚಿನ ಮಹತ್ವ ನೀಡಿಲ್ಲ. ಕೃಷಿ ಉತ್ಪನ್ನಗಳನ್ನು ಹೆಚ್ಚಿಸಲು ಯಾವುದೇ ಯೋಜನೆ ರೂಪಿಸಿಲ್ಲ. ಬಿಪಿಎಲ್ ಕಾರ್ಡ್‌ದಾರರಿಗೆ ‘ಜೀವನ ಚೈತ್ರ ಯಾತ್ರೆ’ ಯೋಜನೆ ಘೋಷಿಸಿದ್ದು, ಇದಕ್ಕೆ ವಯಸ್ಸಿನ ಮಿತಿ ನಿಗದಿಪಡಿಸಿರುವುದು ಊಟಕ್ಕಿಲ್ಲದ
ಉಪ್ಪಿನಕಾಯಿಯಂತಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಬಜೆಟ್ ಅಭಿವೃದ್ಧಿ ಅನುಕೂಲವಾಗಲಿದೆ : ಉದಯಕುಮಾರ್ ಶೆಟ್ಟಿ
ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಿದ್ದು, ಮನೆ ಮನೆಗೆ ಗಂಗೆ ಶುದ್ಧ ಕುಡಿಯುವ ನೀರಿನ ಯೋಜನೆ ಸ್ವಾಗತಾರ್ಹವಾಗಿದೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಹಂಗಾರು ಕಟ್ಟೆ ಹಾಗೂ ಮಂಗಳೂರಿನ ಕುಳಾಯಿ ಬಂದರಿನ ಅಭಿವೃದ್ಧಿಗೆ ಅನುದಾನ ನೀಡಿದ್ದು, ಇದು ಕರಾವಳಿ ಅಭಿವೃದ್ಧಿಗೆ ಅನುಕೂಲವಾಗಲಿದೆ. ಕಾರ್ಕಳದಲ್ಲಿ ಜವಳಿ ಪಾರ್ಕ್ ನಿರ್ಮಿಸಲು ಯೋಜನೆ ರೂಪಿಸಿದ್ದು, ಇದರಿಂದ ಜವಳಿ ಉದ್ಯಮಕ್ಕೆ ಪೋತ್ಸಾಹ ನೀಡಿದಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಿರಾಶಾದಾಯಕ ಬಜೆಟ್: ಯೋಗೀಶ್ ಶೆಟ್ಟಿ
ಸಿಎಂ ಯಡಿಯೂರಪ್ಪ ಯಾವುದೇ ಹೊಸತನವಿಲ್ಲದ ನಿರಾಶಾದಾಯಕ ಬಜೆಟ್ ಮಂಡಿಸಿದ್ದು, ಕೇಂದ್ರದಿಂದ ಜಿಎಸ್‌ಟಿ ಹಾಗೂ ತೆರಿಗೆ ಪಾಲನ್ನು ಪಡೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ
ಟೀಕಿಸಿದ್ದಾರೆ.
ಕುಸಿಯುತ್ತಿರುವ ಆರ್ಥಿಕತೆಯನ್ನು ಮೇಲ್ತೆಲು ಪ್ರಯತ್ನಿಸುವ ಬದಲು, ಪೆಟ್ರೋಲ್, ಡೀಸೆಲ್ ಮೇಲಿನ ಸುಂಕವನ್ನು ಏರಿಸುವ ಮೂಲಕ ಬಡವರು ಹಾಗೂ ಮಧ್ಯಮ ವರ್ಗದ ಜನರ ಮೇಲೆ ಬರೆ ಎಳೆದಿದ್ದಾರೆ ಎಂದು ಜರಿದಿದ್ದಾರೆ.
ಜನಸಾಮಾನ್ಯರ ಬಜೆಟ್: ಮಟ್ಟಾರು
ರಾಜ್ಯವನ್ನು ಸಮೃದ್ಧಿಯತ್ತ ಕೊಂಡೊಯ್ಯುವುದರ ಜತೆಗೆ ಬಡವರು ಸೇರಿದಂತೆ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಒತ್ತು ನೀಡಿರುವ ಅತ್ಯುತ್ತಮ ಬಜೆಟ್ ಇದಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ
ಅಭಿಪ್ರಾಯಪಟ್ಟಿದ್ದಾರೆ.
ಮೀನುಗಾರಿಕಾ ಬಂದರುಗಳ ಅಭಿವೃದ್ಧಿ, ಕೃಷಿ ಸಾಲ ಮನ್ನಾ, ಬಡ್ಡಿ ರಹಿತ ಹೊಸ ಕೃಷಿ ಸಾಲ ಮೊದಲಾದ ಯೋಜನೆ ರೈತರಿಗೆ ಆಶಾದಾಯಕವಾಗಿದೆ. ಕಿಂಡಿ ಅಣೆಕಟ್ಟು ಅಭಿವೃದ್ಧಿ, ಇಸ್ರೆಲ್ ಮಾದರಿ ನೀರಾವರಿ ಯೋಜನೆ, ಪ್ರತಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಯೋಜನೆ ರಾಜ್ಯದ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದಿದ್ದಾರೆ.
ಮೀನುಗಾರಿಕಾ ಅಭಿವೃದ್ಧಿಗೆ ಪೂರಕ: ಯಶ್‌ಪಾಲ್
ಕರಾವಳಿ ಕರ್ನಾಟಕದ ಪ್ರಮುಖ ಮೀನುಗಾರಿಕಾ ಬಂದರುಗಳಾದ ಹೆಜಮಾಡಿ, ಹಂಗಾರಕಟ್ಟೆ, ಮರವಂತೆ, ತೆಂಗಿನಗುಂಡಿ, ಕಾರವಾರ ಬಂದರುಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ 407 ಕೋಟಿ ಅನುದಾನ ಮೀಸಲಿಡುವ ಮೂಲಕ ಮೀನುಗಾರಿಕೆ ಅಭಿವೃದ್ಧಿಗೆ ಹೊಸ ಚೈತನ್ಯ ನೀಡಿದಂತಾಗಿದೆ ಎಂದು ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಹೇಳಿದ್ದಾರೆ.
ತಾಂತ್ರಿಕತೆ ಅಳವಡಿಕೆಗೆ ಕರ್ನಾಟಕ ಮತ್ಸ್ಯ ವಿಕಾಸ ಯೋಜನೆಯಡಿ 1.5 ಕೋಟಿ ಹಾಗೂ ಒಂದು ಸಾವಿರ ಮಹಿಳಾ ಮೀನುಗಾರರಿಗೆ ದ್ವಿಚಕ್ರ ವಾಹನ ಖರೀದಿಗೆ 5 ಕೋಟಿ ಅನುದಾನ ನೀಡಲಾಗಿದ್ದು, ಕುಳಾಯಿ ಬಂದರಿನಲ್ಲಿ 12.5 ಕೋಟಿ ವೆಚ್ಚದಲ್ಲಿ ಮೀನು ರಫ್ತು ಸ್ಥಾವರ ನಿರ್ಮಿಸುವ ಯೋಜನೆ ಮೀನುಗಾರಿಕೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ ಎಂದು
ಅಭಿಪ್ರಾಯಪಟ್ಟಿದ್ದಾರೆ.