ಕುಂದಾಪುರ: ಪರಿಸರ – ಜೀವಜಲ ರಕ್ಷಣೆ, ಸಾರ್ವಜನಿಕ ಸಂಪತ್ತಿನ ರಕ್ಷಣೆ, ರಾಷ್ಟ್ರ ಧ್ವಜ, ಗೀತೆ ಗೌರವ ನೀಡುವುದು ಎಲ್ಲವೂ ನಿಜವಾದ ರಾಷ್ಟ್ರ ನಿರ್ಮಾಣದ ಕಾರ್ಯ ಎಂದು ನಿವೃತ್ತ ಯೋಧ ಬೈಂದೂರು ಚಂದ್ರಶೇಖರ ನಾವಡ ಹೇಳಿದರು.
ಅವರು ನೆಹರು ಯುವ ಕೇಂದ್ರ ಉಡುಪಿ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಮಹಿಳಾ ಸಂಘ ರಿ. ಬೈಂದೂರು ಆಶ್ರಯದಲ್ಲಿ ಬುಧವಾರ ಬೈಂದೂರಿನ ಶ್ರೀ ರಾಜರಾಜೇಶ್ವರ ಸಭಾಭವನದಲ್ಲಿ ಆಯೋಜಿಸಿದ್ದ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಯುವ ಜನತೆ ಮತ್ತು ರಾಷ್ಟ್ರನಿರ್ಮಾಣ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ನಾಗರಿಕರು ತಾವಿದ್ದಲ್ಲೆ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವುದು, ಇಂಧನ ಉಳಿಸುವುದು, ಉತ್ಪಾದನೆ ವೃದ್ಧಿ, ಸ್ವದೇಶೀ ಸಾಮಾನುಗಳ ಬಳಕೆ, ಪ್ರಾಕೃತಿಕ ಸಂಪತ್ತಿನ ಮಿತ ಬಳಕೆ ಮೊದಲಾದ ರಾಷ್ಟ್ರ ಹಿತ ರಕ್ಷಣೆಯ ಕಾರ್ಯಗಳ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳಬಹುದು ಎಂದರು.
ಬೈಂದೂರು ದಲಿತ ಸಂಘದ ಸಮಿತಿ ಸಂಚಾಲಕ ಮಂಜುನಾಥ ನಾಗೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯುವಕರಿಗೆ ಉಪಯುಕ್ತ ಹಾಗೂ ಎಲ್ಲರಿಗೂ ಅಗತ್ಯವಾದ ವಿಚಾರಗಳ ಕುರಿತು ಸೂಕ್ತ ಸಮಯದಲ್ಲಿ ಆಯೋಜಿಸಲಾಗಿರುವ ಉಪನ್ಯಾಸ ಕಾರ್ಯಕ್ರಮಗಳು ಮೌಲ್ಯಯುತವಾದದು ಎಂದರು.
ಡಾ. ಬಿ. ಆರ್. ಅಂಬೇಡ್ಕರ್ ಮಹಿಳಾ ಸಂಘದ ಅಧ್ಯಕ್ಷೆ ವಿನಯಾ ಮಾಸ್ತಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಸಿಟಿ ಜೆಸಿಐ ಅಧ್ಯಕ್ಷೆ ಪ್ರಿಯಾ ಕಮಲೇಶ್ ಉಪಸ್ಥಿತರಿದ್ದರು.
ಬಳಿಕ ಸ್ವಚ್ಛ ಭಾರತ ಹಾಗೂ ಜಲಸಾಕ್ಷರತೆ ವಿಷಯದ ಬಗ್ಗೆ ಜೀವಜಲ ಎಂಟರ್‌ಪ್ರೈಸಸ್‌ನ ಜ್ಯೋತಿ ಸಾಲಿಗ್ರಾಮ, ವ್ಯಕ್ತಿತ್ವ ವಿಕಸನ ಹಾಗೂ ಧನಾತ್ಮಕ ಚಿಂತನೆ ವಿಷಯ ಬಗ್ಗೆ ಜೆಸಿಐ ವಲಯ ತರಬೇತುದಾರರಾದ ಅಕ್ಷತಾ ಗಿರೀಶ್ ಅವರಿಂದ ಉಪನ್ಯಾಸ ಕಾರ್ಯಾಗಾರ ಜರುಗಿತು.
ನೆಹರು ಯುವ ಕೇಂದ್ರದ ಸುನಿಲ್ ಹೆಚ್. ಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಬಿ. ಆರ್. ಅಂಬೇಡ್ಕರ್ ಮಹಿಳಾ ಸಂಘದ ಗೀತಾ ಸುರೇಶ್ ಸ್ವಾಗತಿಸಿ, ಚೈತ್ರಾ ಸತೀಶ್ ಕಾರ್ಯಕ್ರಮ ನಿರೂಪಿಸಿದರು.












