ಕಾರ್ಕಳ: ವಿಜ್ಞಾನ ಹಾಗೂ ತಂತ್ರಜ್ಞಾನ ಇವೆರಡೂ ಒಂದೇ ನಾಣ್ಯದ ಎರಡು ಪ್ರಮುಖ ಭಾಗಗಳಿದ್ದಂತೆ. ಒಂದನ್ನು ಹೊರತುಪಡಿಸಿ ಇನ್ನೊಂದು ಅಭಿವೃದ್ಧಿ ಕಾಣಲು ಅಸಾಧ್ಯ” ಎಂದು ಪುಣೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ಎಜುಕೇಶನ್ & ರಿಸರ್ಚ್ ಸಂಸ್ಥೆಯ ಭೌತಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ. ಟಿ.ಎಸ್. ಮಹೇಶ್ ಅಭಿಪ್ರಾಯಪಟ್ಟರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಭಾಗದ ವತಿಯಿಂದ ಫೆ.೨೮ ರಂದು ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ “ವಿದ್ಯಾರ್ಥಿಗಳಲ್ಲಿ ಸಂಶೋಧನೆಯ ಬಗೆಗೆ ಆಸಕ್ತಿ ಮೂಡಬೇಕು. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಸಂಶೋಧನೆಯ ಬಗೆಗೆ ತಿಳುವಳಿಕೆ ನೀಡುವಂತಹ ಕಾರ್ಯಕ್ರಮಗಳು ಹಲವು ನಡೆಸಬಹುದಾಗಿದೆ. ಈ ಸಾಲಿನ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಥೀಮ್ ವಿವರಿಸುವಂತೆ ‘ವಿಜ್ಞಾನ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ’ ಹೆಚ್ಚುವಂತಾಗಬೇಕು” ಎಂದರು.
ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಡಾ. ಟಿ.ಎಸ್. ಮಹೇಶ್ ಅವರು ‘ಕ್ವಾಂಟಮ್ ಕಂಪ್ಯೂಟರ್ ಸಾಫ್ಟ್ವೇರ್ ಆಂಡ್ ಹಾರ್ಡ್ವೇರ್: ಎ ಬ್ರೀಫ್ ಓವರ್ವ್ಯೂ ಆಫ್ ಪ್ರೊಸೆಸ್ ಆಂಡ್ ಪ್ರಸ್ಪೆಕ್ಟ್’ ಎಂಬ ವಿಷಯದ ಬಗೆಗೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರು, ಡೀನ್ಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಶೋಭಾ ಪ್ರಭು ಸ್ವಾಗತಿಸಿದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶಿವಪ್ರಸಾದ್ ಶೆಟ್ಟಿ ವಂದಿಸಿದರು. ರಸಾಯನಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕಿ ಡಾ.ಆರತಿ ಕಾರ್ಯಕ್ರಮ ನಿರೂಪಿಸಿದರು.