9ಲಕ್ಷ ಮೆಟ್ರಿಕ್ ಟನ್ ಮರಳು ತೆರವಿಗೆ ಕೆಸಿಎಂಝಡ್ ಅನುಮೋದನೆ: ರಘುಪತಿ ಭಟ್

ಉಡುಪಿ: ಜಿಲ್ಲೆಯ ಸಿಆರ್‌ಝಡ್‌ ವ್ಯಾಪ್ತಿಯ ನದಿಗಳಲ್ಲಿ ಗುರುತಿಸಲಾದ 9ಲಕ್ಷ ಮೆಟ್ರಿಕ್‌ಟನ್‌ ಮರಳು ತೆರವುಗೊಳಿಸಲು ರಾಜ್ಯ ಕರಾವಳಿ ನಿಯಂತ್ರಣ ವಲಯ ಪ್ರಾಧಿಕಾರ (ಕೆಸಿಎಂಝಡ್‌)ದಿಂದ ಅನುಮೋದನೆ ದೊರೆತಿದ್ದು, ಇನ್ನು ಎರಡ್ಮೂರು ದಿನಗಳೊಳಗೆ ಡಿಸಿ ಅಧ್ಯಕ್ಷತೆಯ 7 ಮಂದಿಯ ಜಿಲ್ಲಾ ಮರಳು ಸಮಿತಿ 171 ಪರವಾನಗಿದಾರರಿಗೆ ಮರಳು ದಿಬ್ಬ ತೆರವು ಮಾಡಲು ಪರವಾನಗಿ ನೀಡಲಿದೆ. ಆ ಬಳಿಕ ಆ್ಯಪ್‌ ಮೂಲಕವೇ ಮರಳು ವಿತರಿಸುವ ಕಾರ್ಯ ನಡೆಯಲಿದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್‌ ಹೇಳಿದರು.
ಉಡುಪಿ ತಾ.ಪಂ.‌ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ‌ ದಿನೇಶ್‌ ಕೋಟ್ಯಾನ್‌ ಪ್ರಸ್ತಾಪಿಸಿದ ಮರಳು ಸಮಸ್ಯೆಯ ವಿಷಯಕ್ಕೆ ಪೂರಕವಾಗಿ ಮಾತನಾಡಿದರು.
ಪಡುಬಿದ್ರಿಯ ಶಾಂಭಾವಿ, ಪಾಂಗಾಳ, ಕಟಪಾಡಿ, ಹೆಜಮಾಡಿ ಹಾಗೂ ಬಾರ್ಕೂರಿನ ಹಂದಾಡಿಯ‌ ನದಿಗಳನ್ನು ಈ ಹಿಂದಿನ ಮರಳು ಗುರುತಿಸುವ ಸರ್ವೆಯಿಂದ ಕೈಬಿಡಲಾಗಿತ್ತು. ಇದರಿಂದ ಜಿಲ್ಲೆಯಲ್ಲಿ ಮತ್ತೆ ಸ್ವಲ್ಪಮಟ್ಟಿನ ಮರಳಿನ ಸಮಸ್ಯೆ ಎದುರಾಗಿದೆ. ಈಗ ಹೊಸದಾಗಿ ಮಾಡಲಾದ ಸರ್ವೆಯಲ್ಲಿ ಈ ಭಾಗದಲ್ಲಿಯೂ ಮರಳು ದಿಬ್ಬ ತೆರವು ಮಾಡಲು ಅನುಮತಿ‌ ದೊರಕಿದ್ದು, ಶೀಘ್ರದಲ್ಲಿಯೇ ಜಿಲ್ಲೆಯಲ್ಲಿ ಅಗತ್ಯವಿರುವ ಕಡೆಗಳಿಗೆ ಮರಳು ಪೂರೈಕೆ ಮಾಡುವ ಕಾರ್ಯ ನಡೆಯಲಿದೆ ಎಂದು ಭರವಸೆ ನೀಡಿದರು.
ಮೂರು ವರ್ಷ ಕಳೆದರೂ ಸಂತ್ರಸ್ತರಿಗೆ ಸೂರಿಲ್ಲ ಮೂರು ವರ್ಷಗಳ ಹಿಂದೆ ಹೆಜಮಾಡಿ ರಾಷ್ಟ್ರೀಯ ಹೆದ್ದಾರಿ ಟೋಲ್‌ಗೇಟ್‌ ನಿರ್ಮಿಸಲು ಭೂಸ್ವಾಧೀನ ಮಾಡಲಾಗಿದ್ದು, ಇದರಿಂದ 14 ಕುಟುಂಬಗಳು ಮನೆ ಕಳೆದುಕೊಂಡಿವೆ. ಆದರೆ ಈವರೆಗೂ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಟ್ಟಿಲ್ಲ. ವಸತಿ ಯೋಜನೆಯಡಿ ಬಿಡುಗಡೆಯಾದ ಅನುದಾನದಲ್ಲಿ ಅರ್ಧ ಮನೆ ನಿರ್ಮಾಣವಾಗಿದ್ದು, ಅದು ಈಗ‌ ಶಿಥಿಲಗೊಂಡಿದೆ ಎಂದು ಸದಸ್ಯೆ ರೇಣುಕಾ ಸಭೆಗೆ ತಿಳಿಸಿದರು.
ಈ ಬಗ್ಗೆ ನಿರ್ಮಿತಿ ಕೇಂದ್ರ ಜತೆಗೆ ಕೂಡಲೇ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಾಪಂ ಇಒ ಮೋಹನ್‌ರಾಜ್‌ ಹೇಳಿದರು.
ಅಂಗವಿಕಲರಿಗೆ ಪೋಸ್ಟ್‌ ಮೂಲಕ ಪಿಂಚಣಿ ಬರುತ್ತಿಲ್ಲ. ಕೈ ಕಾಲಿನಲ್ಲಿ ಸ್ವಾಧೀನ ಇಲ್ಲದವರಿಗೆ ಅಂಚೆಕಚೇರಿಗೆ ಹೋಗಿ ಪಿಂಚಣಿ ಪಡೆಯಲು ತುಂಬಾ ಕಷ್ಟ ಆಗುತ್ತಿದೆ. ಹಾಗಾಗಿ ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಸದಸ್ಯೆ ಡಾ. ಸುನೀತಾ ಶೆಟ್ಟಿ ಒತ್ತಾಯಿಸಿದರು.
ತಾಪಂ ಅಧ್ಯಕ್ಷೆ ನೀತಾ ಗುರುರಾಜ್‌, ಉಪಾಧ್ಯಕ್ಷ ಭುಜಂಗ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್‌ ಕುಮಾರ್‌ ಬೈಲಕೆರೆ, ಇಒ ಮೋಹನ್‌ ರಾಜ್‌ ಉಪಸ್ಥಿತರಿದ್ದರು.