ಉಡುಪಿ ಫೆ.22: ರಾಜ್ಯಾದ್ಯಂತ ಏಪ್ರಿಲ್ 26 ರಂದು ನಡೆಯುವ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸಂಬಂದಪಟ್ಟ ಎಲ್ಲಾ ದೇವಾಲಯಗಳಲ್ಲಿ ಎಲ್ಲಾ ವ್ಯವಸ್ಥಿತ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ರಾಜ್ಯದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಅವರು ಭಾನುವಾರ, ಉಡುಪಿಯ ಪುರ ಭವನದಲ್ಲಿ , ಜಿಲ್ಲಾಡಳಿತ ಮತ್ತು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಸಹಯೋಗದಲ್ಲಿ ನಡೆದ , ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ 100 ದೇವಾಲಯಗಳಲ್ಲಿ ಪ್ರಥಮ ಹಂಥದಲ್ಲಿ ಏಪ್ರಿಲ್ 26 ರಂದು ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು, ದೇವಾಲಯಗಳಲ್ಲಿ ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ, ಎ ದರ್ಜೆ ದೇವಾಲಯಗಳು ಇಲ್ಲದ ಸ್ಥಳದಲ್ಲಿ ಬಿ ಮತ್ತು ಸಿ ದರ್ಜೆಯ ದೇವಾಲಯಗಳಲ್ಲಿ ವಿವಾಹ ಏರ್ಪಡಿಸಲು ಸಿದ್ದತೆ ನಡೆಸಲಾಗಿದೆ, ಎಲ್ಲಾ ಜಿಲ್ಲೆಗಳ ಶಾಸಕರಿಗೆ ಪತ್ರ ಬರೆದು ಈ ಕಾರ್ಯಕ್ರಮಕ್ಕೆ ಅಗತ್ಯ ಸಹಕರವನ್ನು ಕೋರಲಾಗಿದೆ, ಎಲ್ಲಡೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸರಳ ವಿವಾಹದಲ್ಲಿ ಮದುವೆಯಾಗುವ ವಧುವಿಗೆ ಬಟ್ಟೆ ಖರೀದಿಸಲು 10000 ಮತ್ತು ವರನಿಗೆ 5000 ಗಳನ್ನು ಹಾಗೂ 40000 ದ ವೆಚ್ಚದಲ್ಲಿ ಚಿನ್ನದ ಮಾಂಗಲ್ಯ ಸರ ನೀಡಲಾಗುತ್ತಿದೆ, ಅಲ್ಲದೆ, ಕಂದಾಯ ಇಲಖೆಯಲ್ಲಿ ಆದರ್ಶ ವಿವಾಹ ಯೋಜನೆಯಡಿ 10000 ಮತ್ತು ಪ.ಜತಿ ಪಂಗಡದ ವಧು ವರರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 50000 ರೂ ದೊರೆಯಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸಪ್ತಪಧಿ ರಥದ ಮೂಲಕ ಎಲ್ಲಡೆ ಸಾಮೂಹಿಕ ವಿವಾಹ ಕಾರ್ಯಕ್ರಮದ ಬಗ್ಗೆ ವ್ಯಾಪಕ ಅರಿವು ಮೂಡಿಸಲಾಗುತ್ತಿದ್ದು, ಸರಳ ವಿವಾಹವಾಗುವ ವಧು ವರರನ್ನು , ವಿವಾಹಕ್ಕೆ ಆಗಮಿಸುವ ಸಾಧು ಸಂತರು ಮತ್ತು ಗಣ್ಯ ವ್ಯಕ್ತಿಗಳು ಹಾರೈಸಲಿದ್ದಾರೆ ಈಗಾಗಲೇ ಸುತ್ತೂರು ಶ್ರೀಗಳು, ತೆರಳಬಾಳು ಶ್ರೀಗಳು , ಸಿದ್ದಗಂಗಾ ಶ್ರೀ, ಧರ್ಮಸ್ಥಳದ ವೀರೇಂದ್ರ ಹೆಗಡೆ, ಇನ್ಪೋಸಿಸ್ ನ ಸುಧಾಮೂರ್ತಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ, ಈ ಕಾರ್ಯಕ್ರಮದ ಯಶಸ್ಸಿಗಾಗಿ ರಾಜ್ಯದ 30 ಜಿಲ್ಲೆಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಸಚಿವರು ಹೇಳಿದರು.
ರಾಜ್ಯದ ಪ್ರಮುಖ 25 ಧಾರ್ಮಿಕ ಕೇಂದ್ರಗಳಲ್ಲಿ ಗೋಶಾಲೆ ತೆರೆಯಲು ನಿರ್ಧರಿಸಲಾಗಿದ್ದು, ಯುವ ಜನತೆಯಲ್ಲಿ ಉತ್ತಮ ಸಂಸ್ಕಾರ ಕಲಿಸುವ ಮತ್ತು ನಮ್ಮ ಸಂಸ್ಕೃತಿ ಯನ್ನು ಬೆಳೆಸುವ ಗುರುತರ ಜವಾಬ್ದಾರಿ ದೇವಾಲಯಗಳ ಮೇಲಿದ್ದು, ಉತ್ತಮ ಸಂಸ್ಕಾರ ಪಡೆದ ವ್ಯಕ್ತಿಗಳಿಂದ ಸಮಾಜ ಕಟ್ಟುವ ಕೆಲಸ ಸಾಧ್ಯವಾಗಲಿದೆ , ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಧಾರ್ಮಿಕ ಕೇಂದ್ರಗಳು ಕಾರ್ಯನಿರ್ವಹಿಸಬೇಕು ಎಂದು ಸಚಿವ ಕೋಟ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ನ ಸದಸ್ಯ ಮಹರ್ಷಿ ಆನಂದ ಗುರೂಜಿ ಮಾತನಾಡಿ, ವಿವಾಹ ಎನ್ನುವುದು ಎರಡು ಸಂಬಂದಗಳನ್ನು ಬೆಸೆಯುವ ಪವಿತ್ರ ಕಾರ್ಯ, ಆರ್ಥಿಕ ಅಡಚಣೆಯಿಂದ ತಮ್ಮ ಮಕ್ಕಳ ವಿವಾಹ ಮಾಡಲು ಸಾಲದ ಸುಳಿಯಲ್ಲಿ ಸಿಲುಕಬೇಕಾದ ಹಾಗೂ ಇದುವರೆಗೆ ಮದುವೆ ಮಾಡಲು ಸಾಧ್ಯವಾಗದೆ , ವಿವಾಹವನ್ನು ಮುಂದೂಡುವ ಹಲವು ಪೋಷಕರಿಗೆ, ಆಡಂಬರದ ವಿವಾಹಕ್ಕಾಗಿ ಸಾಲ ಮಾಡಿ , ಸಾಲದ ಹೊರೆಯಿಂದ ಚಿಂತಿತರಾಗಿ, ಸಂತೋಷವಾಗಿ ನವ ಜೀವನ ನಡೆಸಲು ಕಷ್ಟಪಡುವ ವಿವಾಹವಾದ ವಧು ವರರಿಗೆ , ಸರ್ಕಾರದ ಈ ಸರಳ ವಿವಾಹ ಯೋಜನೆ ನೆರವು ನೀಡಲಿದೆ, ಸರಳ ವಿವಾಹದಲ್ಲಿ ಪವಿತ್ರ ಧಾರ್ಮಿಕ ಕೇಂದ್ರಗಳಲ್ಲಿ ವಿವಾಹವಾಗುವ ದಂಪತಿಗಳಿಗೆ ಸಾದು ಸಂತರು ಮತ್ತು ಗಣ್ಯರು, ಹಿರಿಯರು ಆಗಮಿಸಿ, ಹರಸುವುದರ ಜೊತೆಗೆ ಮತ್ತು ಆ ಕ್ಷೇತ್ರದ ಭಗವಂತನ ಆಶೀರ್ವಾದ ಸಹ ದೊರೆಯಲಿದೆ, ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು , ಸರ್ಕಾರದ ಸರಳ ವಿವಾಹ ಯೋಜನೆಯ ಪ್ರಯೋಜನ ಪಡೆಯುವಂತೆ ತಿಳಿಸಿದರು.
ಉಡುಪಿ ಶಾಸಕ ರಘುಪತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ ಪೂಜಾರಿ, ರಾಜ್ಯ ಧಾರ್ಮಿಕ ಪರಿಷತ್ ನ ಸದಸ್ಯ ಸಿದ್ದಲಿಂಗ ಪ್ರಭು, ಜಿಲ್ಲಾ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತ ಎಂ. ರವಿಕುಮಾರ್ ಉಪಸ್ಥಿತರಿದ್ದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿದರು, ಪ್ರಶಾಂತ್ ಹಾವಂಜೆ ನಿರೂಪಿಸಿದರು.
ಜಿಲ್ಲೆಯಲ್ಲಿ ಸಾಮೂಹಿಕ ವಿವಾಹ ಏರ್ಪಡಿಸುವ ದೇವಾಲಯಗಳು ಸೇರಿದಂತೆ ವಿವಿಧ ದೇವಾಲಯಗಳ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು, ವಿವಿಧ ಭಜನಾ ಮಂಡಳಿಗಳ ಪದಾಧಿಕಾರಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.