ಹುಬ್ಬಳ್ಳಿ: ಪಾಕ್ ಪರ ಘೋಷಣೆ ಕೂಗಿದ ಕೆಎಲ್ಇ ಎಂಜಿನಿಯರ್ ಕಾಲೇಜಿನ ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದು, ದೇಶ
ದ್ರೋಹ ಹಾಗೂ ಕೋಮು ಸೌಹಾರ್ದ ಕದಡುವ ಪ್ರಕರಣ ದಾಖಲಿಸಿದ್ದಾರೆ.
ಈ ಕೃತ್ಯದಲ್ಲಿ ಸಿವಿಲ್ ವಿಭಾಗದಲ್ಲಿ 4ನೇ ಸೆಮಿಸ್ಟರ್ ಓದುತ್ತಿರುವ ಅಮೀರ್, ಬಾಸಿತ್ ಹಾಗೂ ಎರಡನೇ ಸೆಮಿಸ್ಟರ್ ಓದುತ್ತಿರುವ ತಾಲೀಬ್ ಪಾಲ್ಗೊಂಡವರು.
ದೇಶದಲ್ಲಿ ಪುಲ್ವಾಮಾ ದಾಳಿ ನಡೆದು ೧ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಫೆ.14 ರಂದು ಕಾಲೇಜಿನಲ್ಲಿ ಹುತಾತ್ಮರನ್ನು ಸ್ಮರಿಸಲಾಯಿತು. ಆದರೆ, ಈ ಮೂವರೂ ಕಾಲೇಜಿನ ವಸತಿ ಗೃಹದಲ್ಲಿ ಪಾಕ್ ಸೇನೆಯ ಹಾಡಿಗೆ ದನಿಗೂಡಿಸಿ ‘ಪಾಕಿಸ್ತಾನ ಜಿಂದಾಬಾದ್’, ‘ಪಾಕಿಸ್ತಾನ ಆಜಾದಿ’ ಎಂದು ಘೋಷಣೆ ಕೂಗಿದರು. ಅದನ್ನು ವಾಟ್ಸ್ಆ್ಯಪ್ ಸ್ಟೆಟಸ್ ನಲ್ಲಿ ಹಾಕಿಕೊಂಡಿದ್ದಾರೆ. ವಾಟ್ಸ್ ಆ್ಯಪ್ ನಲ್ಲ ವಿಡಿಯೊ ವೈರಲ್ ಆಗುತ್ತಿವುದ್ದನ್ನು ಕಂಡ ಕಾಲೇಜಿನ ಪ್ರಾಚಾರ್ಯ ಬಸವರಾಜ ಅಣಾಮಿ ಅವರು, ಶನಿವಾರ ವಿದ್ಯಾರ್ಥಿಗಳ ವಿಚಾರಣೆ ನಡೆಸಿದರು. ಬಜರಂಗ ದಳದ ಕಾರ್ಯಕರ್ತರು ಪ್ರಾಚಾರ್ಯರ ಕೊಠಡಿಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಗಮನಿಸಿದ ಪ್ರಾಚಾರ್ಯರು, ಗೋಕುಲ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಈ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಆಯ್ಕೆಗೊಂಡಿದ್ದು, ಅವರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ ಎಂದು ಪ್ರಾಚಾರ್ಯ ಬಸವರಾಜ ಅಣಾಮಿ ತಿಳಿಸಿದರು.