ಉಡುಪಿ: ಸರಳ, ಸಜ್ಜನಿಕೆಯ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದ ಪಂಡಿತ್ ದೀನ್ದಯಾಳ್ ಅವರು, ಸೈದ್ಧಾಂತಿಕ ನಿಲುವಿನಲ್ಲಿ ಬದ್ಧತೆಯನ್ನು ಹೊಂದಿದ್ದರು.
ಆದ್ದರಿಂದ ಅವರ ಹೆಸರು ಭಾರತದ ರಾಜಕೀಯದಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಘೋಷ್ ಕಾರ್ಯಕರ್ತ ರಾಘವೇಂದ್ರ ಕಾಮತ್ ಹೇಳಿದರು.
ಪಂಡಿತ್ ದೀನ್ದಯಾಳ್ ಬಲಿದಾನ ದಿನದ ಅಂಗವಾಗಿ ಕಡಿಯಾಳಿಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಮರ್ಪಣ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನಸಂಘವನ್ನು ರಾಜಕೀಯವಾಗಿ ಬೆಳೆಸುವುದರ ಜತೆಗೆ ಅದನ್ನು ಮುಂಚೂಣಿಗೆ ತರುವಲ್ಲಿ ದೀನ್ದಯಾಳ್ ಅವರ ಪಾತ್ರ ದೊಡ್ಡದಿದೆ. ಜನಸಂಘದಲ್ಲಿ ಹಲವಾರು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ ಅವರು, ರಾಜಕಾರಣದಲ್ಲಿ ಹೊಸ ಪರ್ವವನ್ನು ಆರಂಭಿಸಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಶಕ್ತಿ ತುಂಬ ಬೇಕೆನ್ನುವ ಅವರ ಆದರ್ಶ ಮತ್ತು ಚಿಂತನೆಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಬೇಕು ಎಂದರು.
ಹೆಸರು ಮತ್ತು ಪ್ರಚಾರ ಬಯಸದೆ ಮಾಡುವ ಸೇವೆಗೆ ಭಾರತಾಂಬೆಯ ಅನುಗ್ರಹ ಇರುತ್ತದೆ. ಅಲ್ಲದೆ ಈ ಸೇವೆಯು ಸಮಾಜಕ್ಕೆ ಅರ್ಪಣೆ ಆಗುತ್ತದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರಿಗೂ ಪಂಡಿತ್ ದೀನ್ದಯಾಳ್ ಅವರ ವ್ಯಕ್ತಿತ್ವ, ದೂರದೃಷ್ಟಿ ಹಾಗೂ ಮಾರ್ಗದರ್ಶನ ಮಾದರಿಯಾಗಿದೆ ಎಂದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು. ನಗರಸಭೆ ಸದಸ್ಯ ಗಿರೀಶ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.