ಉಡುಪಿ: ಇಲ್ಲಿನ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಇದೇ 10ರಂದು ಸಂಜೆ 6.30ಕ್ಕೆ ನೃತ್ಯನಿಕೇತನ ಕೊಡವೂರು ಸಂಸ್ಥೆಯ ‘ನಾರಸಿಂಹ’ ಎಂಬ ವಿನೂತನ ನೃತ್ಯರೂಪಕ ಪ್ರಯೋಗವನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅನಾವರಣಗೊಳಿಸುವರು ಎಂದು ಸಂಸ್ಥೆಯ ನಿರ್ದೇಶಕ ಸುಧೀರ್ ರಾವ್ ಕೊಡವೂರು ತಿಳಿಸಿದರು.
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಇದು ಪುರಾಣದಲ್ಲಿ ಬರುವ ಪ್ರಹ್ಲಾದನ ಕಥೆಯ ನೃತ್ಯರೂಪಕವಾಗಿದ್ದು, ಸಾಂಪ್ರದಾಯಿಕ ಕಥಾವಿನ್ಯಾಸದಲ್ಲಿ ಯಾವ ಬದಲಾವಣೆ ಮಾಡದೆ ಪ್ರಸ್ತುತ ಪಡಿಸಲಾಗುತ್ತಿದೆ. ನೃತ್ಯ, ಕಾವ್ಯ ಹಾಗೂ ಸಂಗೀತ ಸಂಯೋಜನೆ ಹೊಸತನದಿಂದ ಕೂಡಿದ್ದು, ನೃತ್ಯರೂಪಕಕ್ಕೆ ರಂಗಭೂಮಿಯ ಸ್ಪರ್ಶವನ್ನು ನೀಡಲಾಗಿದೆ ಎಂದರು.
ಡಾ. ಶ್ರೀಪಾದ ಭಟ್ ಈ ನೃತ್ಯರೂಪಕವನ್ನು ನಿರ್ದೇಶಿಸಿದ್ದಾರೆ. ಸಾಹಿತಿ ಸುಧಾ ಆಡುಕಳ ಸಾಹಿತ್ಯ ನೀಡಿದ್ದಾರೆ. ರಾಜು ಮಣಿಪಾಲ, ಪ್ರಶಾಂತ್ ಉದ್ಯಾವರ ರಂಗಸಜ್ಜಿಕೆ ನಿರ್ವಹಿಸಿದ್ದಾರೆ. ವಿದುಷಿ ಮಾನಸಿ ಸುಧೀರ್ ಮತ್ತು ಅನಘಶ್ರೀ ನೃತ್ಯರೂಪಕ ಪ್ರಸ್ತುತ ಪಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಡಾ. ಶ್ರೀಪಾದ ಭಟ್, ವಿದುಷಿ ಮಾನಸಿ ಸುಧೀರ್, ಶಾರದಾ ಉಪಾಧ್ಯ ಇದ್ದರು.