ಉಡುಪಿ: ಬಿಜೆಪಿ ಜಿಲ್ಲಾಧ್ಯಕ್ಷರಾಗಿ‌ ಕುಯಿಲಾಡಿ ಸುರೇಶ್ ನಾಯಕ್ ಅಧಿಕಾರ ಸ್ವೀಕಾರ

ಉಡುಪಿ: ಬಿಜೆಪಿ ಉಡುಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಕುಯಿಲಾಡಿ ಸುರೇಶ್‌ ನಾಯಕ್‌ ಅವರು ಬುಧವಾರ ಕಡಿಯಾಳಿಯ ಬಿಜೆಪಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅಧಿಕಾರ ಹಸ್ತಾಂತರಿಸಿದರು.
ಆನಂತರ ಮಾತನಾಡಿದ ನೂತನ ಅಧ್ಯಕ್ಷ ಸುರೇಶ್‌ ನಾಯಕ್‌, ಪಕ್ಷವು ನನ್ನ ಮೇಲೆ ನಂಬಿಕೆ ಇಟ್ಟು ಪಕ್ಷದ ಜವಾಬ್ದಾರಿಯನ್ನು ವಹಿಸಿದೆ. ಆ ಜವಾಬ್ದಾರಿಯನ್ನು ಉಳಿಸಿಕೊಂಡು ಪಕ್ಷವನ್ನು ಇನ್ನಷ್ಟು ಸದೃಢವಾಗಿ ಕಟ್ಟುವ ಕೆಲಸ ಮಾಡುತ್ತೇನೆ ಎಂದರು.
ಪಕ್ಷವು ನನ್ನನ್ನು ಮಂಡಲದ ಅಧ್ಯಕ್ಷ ಸ್ಥಾನದಿಂದ ಜಿಲ್ಲಾಧ್ಯಕ್ಷ ಸ್ಥಾನದವರೆಗೆ ಬೆಳೆಸಿದೆ. ಪಕ್ಷದ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಂಘಟನಾತ್ಮಕವಾಗಿ ಬೆಳೆಸಲು ಶ್ರಮಪಡುತ್ತೇನೆ. ಸಹಕಾರಿ ಕ್ಷೇತ್ರದಲ್ಲೂ ಬಿಜೆಪಿಯನ್ನು ಭದ್ರವಾಗಿ ನೆಲೆಯೂರುವಂತೆ ಮಾಡಲಾಗುವುದು. ಪಕ್ಷದ ಕಚೇರಿಯಲ್ಲಿ ಪ್ರತಿದಿನ ಸಂಜೆಯ ಸಮಯವನ್ನು ಕಾರ್ಯಕರ್ತರಿಗಾಗಿ ಮೀಸಲಿಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೇಮಕಗೊಂಡ ಮಂಡಲದ ಅಧ್ಯಕ್ಷರುಗಳಾದ ಬೈಂದೂರಿನ ಎಂ. ದೀಪಕ್‌ ಕುಮಾರ್‌ ಶೆಟ್ಟಿ, ಕುಂದಾಪುರದ ಶಂಕರ ಅಂಕದಕಟ್ಟೆ, ಉಡುಪಿ ಗ್ರಾಮಾಂತರದ ವೀಣಾ ವಿ. ನಾಯಕ್‌, ಉಡುಪಿ ನಗರದ ಮಹೇಶ್‌ ಠಾಕೂರ್‌, ಕಾಪುವಿನ ಶ್ರೀಕಾಂತ್‌ ನಾಯಕ್‌, ಕಾರ್ಕಳದ ಮಹಾವೀರ್‌ ಹೆಗ್ಡೆ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.
ಮಂಡಲದ ನಿಕಟಪೂರ್ವ ಅಧ್ಯಕ್ಷರುಗಳಾದ ಬೈಂದೂರಿನ ಸದಾನಂದ, ಕುಂದಾಪುರದ ಸುರೇಶ್‌ ಶೆಟ್ಟಿ, ಉಡುಪಿ ನಗರದ ಪ್ರಭಾಕರ ಪೂಜಾರಿ, ಗ್ರಾಮಾಂತರದ ಪ್ರತಾಪ್‌ ಹೆಗ್ಡೆ, ಕಾಪುವಿನ ಪ್ರಕಾಶ ಶೆಟ್ಟಿ ಪಾದೆಬೆಟ್ಟು, ಕಾರ್ಕಳದ ಮಣಿರಾಜ್‌ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಬೈಂದೂರು ಶಾಸಕ ಸುಕುಮಾರ್‌ ಶೆಟ್ಟಿ, ಜಿಪಂ ಅಧ್ಯಕ್ಷ ದಿನಕರ ಬಾಬು. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು. ಕುತ್ಯಾರು ನವೀನ್‌ ಶೆಟ್ಟಿ ಸ್ವಾಗತಿಸಿದರು. ಮನೋಹರ್‌ ವಂದಿಸಿದರು. ಗಿರೀಶ್‌ ಅಂಚನ್‌ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲೆಯಲ್ಲಿ ಬಿಜೆಪಿ ಗಟ್ಟಿಯಾಗಿದೆ
ಇಂದು ಜಿಲ್ಲೆಯಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆಯೂರಿದ್ದರೆ, ಇದರಲ್ಲಿ ಪಕ್ಷದ ಸಂಸದರು,
ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರ ಸಹಕಾರ ಬಹಳಷ್ಟಿದೆ. ಐದು ವಿಧಾನಸಭಾ ಕ್ಷೇತ್ರ, ನಗರಸಭೆ, ಜಿಪಂ, ತಾಪಂಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ, ಅದಕ್ಕೆ ಬಿಜೆಪಿ ಸಂಘಟಿತ ಹೋರಾಟವೇ ಕಾರಣ ಎಂದು ನಿರ್ಗಮಿತ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.