ಕಟೀಲು ಬ್ರಹ್ಮಕಲಶೋತ್ಸವ: ವಿಶೇಷ ವೇಷ ಧರಿಸಿ ಸಂಗ್ರಹಿಸಿದ ಹಣ ಕ್ಯಾನ್ಸರ್ ಪೀಡಿತ ಮಗುವಿನ ಹೆತ್ತವರಿಗೆ ಹಸ್ತಾಂತರ

ಮಂಗಳೂರು: ಬ್ಲಡ್ ಕ್ಯಾನ್ಸರ್ ಪೀಡಿತ ಪುಟ್ಟ ಕಂದಮ್ಮನ ಚಿಕಿತ್ಸೆಗಾಗಿ ಶ್ರೀ ಕಟೀಲು ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಯುವಕರ ತಂಡವೊಂದು ವಿಶೇಷ ವೇಷ ಧರಿಸಿ 3,00,136 ರೂ. ಹಣ ಸಂಗ್ರಹಿಸಿ ಮಗುವಿನ ಪೋಷಕರಿಗೆ ನೀಡಿದ್ದಾರೆ.
ನಿಹಾರಿಕ ಎಂಬ 5 ವರ್ಷದ ಪುಟ್ಟ ಮಗು ರಕ್ತದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಚಿಕಿತ್ಸೆಗೆ 10 ಲಕ್ಷ ರೂ.‌ ಆಗತ್ಯವಿದೆ. ನಿಹಾರಿಕಾಳ ತಂದೆ ತಾಯಿ ಬಡ ಕುಟುಂಬದವರಾಗಿದ್ದು, ಚಿಕಿತ್ಸೆ ಬೇಕಾದ ಹಣ ಸಂಗ್ರಹಿಸುವುದು ಕಷ್ಟವಾಗಿತ್ತು. ಹೀಗಾಗಿ ಮೂಡಬಿದಿರೆಯ ನೇತಾಜಿ ಬ್ರಿಗೇಡ್ ಯುವ ಸಂಘಟನೆಯ ಸದಸ್ಯರು ಸಹಾಯ ಮಾಡಬೇಕು ಎನ್ನುವ ಉದ್ದೇಶದಿಂದ ತಂಡದ ಸದಸ್ಯ ವಿಕ್ಕಿ ಶೆಟ್ಟಿ ಬೆದ್ರ ವಿಶೇಷ ವೇಷ ಧರಿಸಿ ‌ಸಹಾಯಧನವನ್ನು ಸಂಗ್ರಹಿಸಿದ್ದರು.
ಸಂಗ್ರಹವಾದ ಹಣವನ್ನು ಶಾಸಕ ಉಮಾನಾಥ ಎ ಕೋಟ್ಯಾನ್ ಹಾಗೂ ಕಟೀಲು ದೇವಾಲಯದ ಪ್ರಧಾನ ಅರ್ಚಕ ಹರಿನಾರಾಯಣ ಆಸ್ರಣ್ಣ ಅವರು ಮಗುವಿನ ಪೋಷಕರಿಗೆ ಹಸ್ತಾಂತರ ಮಾಡಿದರು.