ಮಲ್ಪೆ: ಕಳೆದ 20 ದಿನಗಳಿಂದ ಕಣ್ಮರೆಯಾಗಿರುವ ಏಳು ಮಂದಿ ಮೀನುಗಾರರು ಸುರಕ್ಷಿತವಾಗಿ ಹಿಂದಿರುಗಿ ಬರಲೆಂದು ಮಲ್ಪೆಯ ಸಯ್ಯದೀನ್ ಅಬೂಬಕರ್ ಸಿದ್ದೀಕ್ ಜಾಮಿಯಾ ಮಸೀದಿಯಲ್ಲಿ ಶುಕ್ರವಾರ ಜುಮಾ ನಮಾಝಿನ ಖುತ್ಬಾದಲ್ಲಿ ವಿಶೇಷವಾಗಿ ಪ್ರಾರ್ಥನೆ ಮಾಡಲಾಯಿತು. ಮಸೀದಿಯ ಇಮಾಮ್ ಮೌಲಾನ ಇಮ್ರಾನುಲ್ಲಾ ಖಾನ್ ಮನ್ಸೂರಿ ‘ಮಾನವೀಯ ಹಕ್ಕುಗಳು’ ಎಂಬ ವಿಷಯದ ಕುರಿತ ಖುತ್ಬಾ ಪ್ರವಚನದಲ್ಲಿ ಮೀನುಗಾರಿಕೆ ತೆರಳಿದ್ದ ವೇಳೆ ನಾಪತ್ತೆಯಾಗಿರುವ ಎಲ್ಲ ಮೀನುಗಾರರು ಸುರಕ್ಷಿತವಾಗಿ ಮನೆ ಸೇರಲು ಪ್ರಾರ್ಥನೆ ಮಾಡಿದರು.
ನಾಪತ್ತೆಯಾಗಿರುವ ಮೀನುಗಾರರು ಆದಷ್ಟು ಬೇಗ ನಮ್ಮೊಂದಿಗೆ ಸೇರಿಕೊಳ್ಳಲಿ. ಮಾನವರೆಲ್ಲರು ಪರಸ್ಪರ ಸಹೋದರರು, ನಾವು ಪರಸ್ಪರ ಸುಖ-ಕಷ್ಟ ಹಂಚಿಕೊಂಡು ಬಾಳಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಅವರು ದೇವರಲ್ಲಿ ಪ್ರಾರ್ಥಿಸಿದರು. ಮೀನುಗಾರರ ಪತ್ತೆಗೆ ಆಗ್ರಹಿಸಿ ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ ಜ.6ರಂದು ನಡೆಯುವ ಪ್ರತಿಭಟನೆಯಲ್ಲಿ ಮುಸ್ಲಿಮರು ಭಾಗವಹಿಸುವಂತೆ ಇಮಾಮ್ ಕರೆ ನೀಡಿದರು.