ಅವೈಜ್ಙಾನಿಕ ಕಾಮಗಾರಿ: ಜಾಲಾಡಿಯಲ್ಲಿ ಯೂ ಟರ್ನ್ ನೀಡಲು ಆಗ್ರಹ,ಸಾರ್ವಜನಿಕರಿಂದ ಬೃಹತ್ ಕಾಲ್ನಡಿಗೆ ಜಾಥಾ, ಬಹಿರಂಗ ಸಭೆ.

ಕುಂದಾಪುರ: ಹೆಮ್ಮಾಡಿಯ ಮೂವತ್ತುಮುಡಿಯಿಂದ -ಜಾಲಾಡಿ ತನಕ ಸರ್ವೀಸ್ ರಸ್ತೆ ಹಾಗೂ ಜಾಲಾಡಿಯಲ್ಲಿ ಕ್ರಾಸಿಂಗ್ ನೀಡಲು ಆಗ್ರಹಿಸಿ ಶುಕ್ರವಾರ ದಾರಿಗಾಗಿ ಧ್ವನಿ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು.

ಜಾಲಾಡಿ ಸರ್ಕಲ್‌ನಿಂದ ಆರಂಭಗೊಂಡ ಕಾಲ್ನಡಿಗೆ ಜಾಥಾ ಸಂತೋಷನಗರ, ಹೆಮ್ಮಾಡಿ ಪೇಟೆ ಸುತ್ತುವರಿದು ಪಂಚಾಯತ್ ತನಕ ಸಾಗಿ ಅಲ್ಲಿ ಬಹಿರಂಗ ಸಭೆ ನಡೆಯಿತು.

ಹೆಮ್ಮಾಡಿ ಪಂಚಾಯತ್ ಎದುರು ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಪತ್ರಕರ್ತ ಶಶಿಧರ ಹೆಮ್ಮಾಡಿ, ಕರಾವಳಿಯಲ್ಲಿ ಚತುಷ್ಪಥ ಕಾಮಗಾರಿ ಆರಂಭವಾದ ದಿನದಿಂದಲೂ ಸಾರ್ವಜನಿಕರು ಒಂದಿಲ್ಲೊಂದು ಸಮಸ್ಯೆ ಅನುಭವಿಸುತ್ತಲೇ ಬಂದಿದ್ದಾರೆ. ರಾ.ಹೆದ್ದಾರಿಯಲ್ಲಿ ಎಲ್ಲೂ ಕೂಡ ಸರಿಯಾದ ಸರ್ವೀಸ್ ರಸ್ತೆ ನಿರ್ಮಾಣ ಮಾಡಿಲ್ಲ. ಬಸ್ ನಿಲ್ದಾಣ ಆಗಿಲ್ಲ. ಹೆಮ್ಮಾಡಿ ಸರ್ಕಲ್‌ನಲ್ಲಿ ದಿನನಿತ್ಯ ವೃದ್ದರು ಮಹಿಳೆಯರು ಸೇರಿಂದತೆ ಶಾಲಾಮಕ್ಕಳು ರಸ್ತೆ ದಾಟುತ್ತಾರೆ. ಆದರೆ ಅವರೆಲ್ಲರೂ ಜೀವ ಕೈಯ್ಯಲ್ಲಿ ಹಿಡಿದು ರಸ್ತೆ ದಾಟಬೇಕಾದ ಅನಿವಾರ್ಯತೆ ಬಂದೊದಗಿದೆ. ಚತುಚ್ಪಥ ಹೆದ್ದಾರಿ ಗುತ್ತಿಗೆ ವಹಿಸಿಕೊಂಡ ಐಆರ್‌ಬಿ ಗುತ್ತಿಗೆ ಕಂಪೆನಿ ಹೆಮ್ಮಾಡಿಗೆ ದೊಡ್ಡ ಅನ್ಯಾಯ ಮಾಡಿದೆ ಎಂದರು.

ನಮ್ಮ ಮೊದಲ ಬೇಡಿಕೆ ಜಾಲಾಡಿಯಲ್ಲಿ ಯೂಟರ್ನ್‌ಗೆ ಅವಕಾಶ ಮಾಡಿಕೊಡಬೇಕು. ಈಗಾಗಲೇ ಸಂತೋಷನಗರ ಬಸ್ ನಿಲ್ದಾಣದಲ್ಲಿ ಅಗತ್ಯವಿಲ್ಲದಿದ್ದರೂ ಬೇಕೆಂತಲೇ ಯೂಟರ್ನ್ ಕೊಡಲೇಬಾರದೆಂದು ಹಠ ಹಿಡಿದು ಎರಡು ರಸ್ತೆಗಳನ್ನು ಏರುಪೇರು ಮಾಡಿ ಅನ್ಯಾವೆಸಗಿದ್ದಾರೆ. ಆದರೆ ಜಾಲಾಡಿಯಲ್ಲಿ ಯೂಟರ್ನ್ ತೆರೆಯಲೇಬೇಕು. ಜಾಲಾಡಿ, ಹರೆಗೋಡು, ಸಂತೋಷನಗರ, ಬುಗ್ರಿಕಡು ಭಾಗಗಳಲ್ಲಿ ಸಾವಿರಾರು ಮನೆಗಳಿವೆ. ಯೂಟರ್ನ್ ಇಲ್ಲದಿದ್ದರೆ ಇವರೆಲ್ಲರೂ ತಲ್ಲೂರು ಸುತ್ತುವರಿದು ಬರಬೇಕಾಗುತ್ತದೆ. ನಮ್ಮ ಬೇಡಿಕೆಗಳಿಗೆ ಶಾಸಕರು, ಸಂಸದರು, ಪಂಚಾಯತ್ ಸ್ಪಂದಿಸಬೇಕು. ಪಂಚಾಯತ್ ಕೂಡ ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದರು.

ಜನಪ್ರತಿನಿಧಿಗಳು ಜನರ ಪರ ನಿಲ್ಲಲಿ:
ಕಳೆದ ಬಾರಿ ಪಂಚಾಯತ್‌ಗೆ ಮುತ್ತಿಗೆ ಹಾಕಿ ಮೂರು ದಿನಗಳ ಗಡುವು ನೀಡಿದ್ದೆವು. ಮೂರು ದಿನಗಳ ಗಡುವು ಪೂರೈಸಿದರೂ ಏನೂ ಬೆಳವಣಿಗೆ ಆಗಿಲ್ಲ. ಹೆದ್ದಾರಿ ಡಿವೈಡರ್ ತೆರವುಗೊಳಿಸುವುದು ಕಷ್ಟವೇನಲ್ಲ. ಒಂದು ಜೆಸಿಬಿ ತಂದರೆ ಕೆಲಸ ಆಗುತ್ತೆ. ಇಲ್ಲ ನಮ್ಮ ಯುವಕರಿಗೆ ಅನುಮತಿ ಕೊಡಿ. ನಾವೇ ಅದನ್ನು ಒಡೆದು ಹಾಕುತ್ತೇವೆ. ಅಧಿಕಾರಿಗಳನ್ನು ಕರೆಸಿ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ನಾವು ಈ ಜಾಗ ಬಿಟ್ಟು ಕದುಲೋದಿಲ್ಲ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಗೆ ಬರಲು ನಿರಾಕರಿಸಿದ ಶಾಸಕ: ಆಕ್ರೋಶ
ಪ್ರತಿಭಟನಾನಿರತರು ಶಾಸಕರನ್ನು ಸ್ಥಳಕ್ಕೆ ಕರೆಸಿ ಎಂದು ಪಟ್ಟು ಹಿಡಿದ ಬೆನ್ನಲ್ಲೇ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಹರೀಶ್ ಭಂಡಾರಿ ಶಾಸಕರಿಗೆ ಕರೆ ಮಾಡಿ ಸ್ಥಳಕ್ಕೆ ಬರಲು ಮನವಿ ಮಾಡಿಕೊಂಡರು. ಬೇರೊಂದು ಕಾರ್ಯಕ್ರಮದಲ್ಲಿದ್ದರಿಂದ ಅರ್ಧ ಗಂಟೆಯ ನಂತರ ಬಂದು ಮನವಿ ಸ್ವೀಕರಿಸುತ್ತೇನೆ ಎಂದ ಬಳಿಕ ಪ್ರತಿಭಟನಾನಿರತರು ಶಾಸಕರು ಬರುವ ತನಕವೂ ಸ್ಥಳ ಬಿಟ್ಟು ಕದಲೋದಿಲ್ಲ ಎಂದು ಪಟ್ಟು ಹಿಡಿದು ಸ್ಥಳದಲ್ಲೇ ಧರಣಿ ಕೂತರು. ಪ್ರತಿಭಟನೆಗೆ ಆಗಮಿಸಿ ಮನವಿ ಸ್ವೀಕರಿಸುತ್ತೇನೆ ಎಂದು ಭರವಸೆ ನೀಡಿ ಕೊನೆಕ್ಷಣದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದರಿಂದ ಪ್ರತಿಭಟನಾ ಸ್ಥಳಕ್ಕೆ ಬರೋದಿಲ್ಲ ಎಂದು ಶಾಸಕ ಸುಕುಮಾರ ಶೆಟ್ಟಿ ದೂರವಾಣಿ ಕರೆಯಲ್ಲಿ ಹೇಳುತ್ತಿದ್ದಂತೆಯೇ ಪ್ರತಿಭಟನಾಕಾರರು ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ಬಂದಾಗ ಕರೆದಲ್ಲಿ ಬರುತ್ತಾರೆ. ಈಗ ಯಾಕೆ ಬರೋದಿಲ್ಲ. ಇಂತಹ ನಾಟಕಗಳನ್ನೆಲ್ಲಾ ನೀಡಿದ್ದೇವೆ. ಮುಂದೆ ಚುನಾವಣೆಗೆ ಯಾವ ಮುಖ ಹೊತ್ತು ಬರುತ್ತಾರೆ ನೋಡೋಣ ಎಂದು ಶಾಸಕರ ನಡೆಯ ವಿರುದ್ದ ಪ್ರತಿಭಟನಾ ನಿರತರು ಕಿಡಿಕಾರಿದರು.

ಐಆರ್‌ಬಿ ಅಧಿಕಾರಿ, ಸಮಿತಿಯ ಮುಖಂಡರ ನಡುವೆ ವಾಗ್ವಾದ:
ಬಳಿಕ ಸ್ಥಳಕ್ಕಾಗಮಿಸಿದ ಐಆರ್‌ಬಿ ಅಧಿಕಾರಿ ಪ್ರದೀಪ್ ಪ್ರತಿಭಟನಾನಿರತರ ಮನವೊಲಿಸಿಲು ಪ್ರಯತ್ನಿಸಿದರು. ಈ ಮಧ್ಯೆ ಸಮಿತಿಯ ಮುಖಂಡರು ಹಾಗೂ ಐಆರ್‌ಬಿ ಅಧಿಕಾರಿಯ ಜೊತೆ ಬಿರುಸಿನ ವಾಗ್ವಾದ ನಡೆಯಿತು.

ಪ್ರತಿಭಟನೆಯಲ್ಲಿ ಹೆದ್ದಾರಿ ಹೋರಾಟಗಾರ ಕೆಂಚನೂರು ಸೋಮಶೇಖರ ಶೆಟ್ಟಿ, ದಾರಿಗಾರಿ ಧ್ವನಿ ಹೋರಾಟ ಸಮಿತಿಯ ಅಧ್ಯಕ್ಷ ರಾಜು ಪೂಜಾರಿ ಕಾಳೂರಮನೆ, ಕಾರ್ಯದರ್ಶಿ ಜನಾರ್ದನ ಪೂಜಾರಿ, ಸಮಿತಿಯ ಮುಖಂಡರಾದ ಯು, ಸತ್ಯನಾರಾಯಣ ರಾವ್, ರಾಘವೇಂದ್ರ ಕುಲಾಲ್, ಯಾಸೀನ್, ಕರೀಂ ಸಾಹೇಬ್, ಉದಯ್ ಜಾಲಾಡಿ, ಆನಂದ ಪಡುಮನೆ, ಜಲಜ ಮೊಗವೀರ, ಕನಕ, ಆಶಾ, ತೇಜ ದೇವಾಡಿಗ, ಜಗನ್ನಾಥ್ ಹೊಸ್ಕಳಿ, ಪ್ರವೀಣ್ ದೇವಾಡಿಗ, ಪ್ರಶಾಂತ್ ಪಡುಮನೆ, ಶಾಹಿನ್, ರವಿ ಬುಗ್ರಿಕಡು ಪ್ರಶಾಂತ್ ದೇವಾಡಿಗ ಮೊದಲಾದವರು ಇದ್ದರು.

ಕಾಲ್ನಡಿಗೆಯಲ್ಲಿ ಸಾಗಿ ಬಂದ ಸಾರ್ವಜನಿಕರಿಗೆ ಹೋಟೇಲ್ ಜ್ಯುವೆಲ್ ಪಾರ್ಕ್‌ನ ಮಾಲೀಕ ರವಿ ಶೆಟ್ಟಿ ಲಘು ಉಪಹಾರದ ವ್ಯವಸ್ಥೆ ಮಾಡಿದರು. ದಾರಿ ಮಧ್ಯೆ ಸಾಗಿ ದಣಿವರಿದ ಪ್ರತಿಭಟನಾನಿರತರಿಗೆ ಗ್ರಾ.ಪಂ ಉಪಾಧ್ಯಕ್ಷ ಅಂತೋನಿ ಲೂವಿಸ್ ಮಜ್ಜಿಗೆ ನೀಡಿ ದಣಿವಾರಿಸಿದರು. ಕಾಲ್ನಡಿಗೆಯೂದ್ದಕ್ಕೂ ಐಆರ್‌ಬಿ ಕಂಪೆನಿ ಹಾಗೂ ಹೆದ್ದಾರಿ ಪ್ರಾಧಿಕಾರದ ವಿರುದ್ದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು.

ಮೂರು ಗಂಟೆ ಬಳಿಕ ಉನ್ನತಾಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಹೇಳುವುದಾಗಿ ಐಆರ್‌ಬಿ ಅಧಿಕಾರಿಗಳು ಭರವಸೆ ನೀಡಿದ್ದು, ಹೋರಾಟ ಸಮಿತಿಯ ಮುಖಂಡರು ಮೂರು ಗಂಟೆಯ ಬಳಿಕ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿರಲಿಲ್ಲ. ಸುದೀರ್ಘ ದೂರವಾಣಿ ಕರೆ ಬಳಿಕ ಕರೆ ಸ್ವೀಕರಿಸಿ ಮಾತನಾಡಿದ ಅಧಿಕಾರಿ, ಹಿರಿಯ ಅಧಿಕಾರಿ ಇನ್ನೂ ಬಂದಿಲ್. ಬಂದ ಕೂಡಲೇ ಮಾತುಕತೆ ನಡೆಸಿ ಮುಂದಿನ ನಿರ್ಧಾರ ಹೇಳುವುದಾಗಿ ಮತ್ತೆ ಭರವಸೆ ನೀಡಿದರು.