ಮಂಗಳೂರು: ಎನ್ಆರ್ಸಿ, ಸಿಎಎ ವಿರುದ್ಧ ನಾಳೆ ಮಂಗಳೂರು ನಗರದ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ವಿವಿಧ ಸಮಾನ ಮನಸ್ಕ ಸಂಘಟನೆಗಳು ಈ ಪ್ರತಿಭಟನೆಯ ನೇತೃತ್ವ ವಹಿಸಿವೆ. ಅಡ್ಯಾರ್ ಕಣ್ಣೂರಿನ ಶಹಾ ಗಾರ್ಡನ್ ಮೈದಾನದಲ್ಲಿ ನಾಳೆ ಮಧ್ಯಾಹ್ನ 2:30ಕ್ಕೆ ನಡೆಯುವ ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸುಮಾರು 1 ಲಕ್ಷ ಮಂದಿ ಭಾಗವಹಿಸಲಿದ್ದಾರೆ.
ಉಭಯ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ನಡೆಯುವ ಸಮಾವೇಶದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಹರ್ಷ ಮಂದರ್, ಕಣ್ಣನ್ ಗೋಪಿನಾಥನ್, ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ, ಮಾನವ ಹಕ್ಕುಗಳ ಹೋರಾಟಗಾರ ಶಿವಸುಂದರ್, ನ್ಯಾಯವಾದಿ ಸುಧೀರ್ ಕುಮಾರ್ ಮರೋಳಿ ಮುಖ್ಯ ಭಾಷಣ ಮಾಡಲಿದ್ದಾರೆ. ಈ ಸಮಾವೇಶಕ್ಕೆ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ಉಡುಪಿ, ಕಾರವಾರ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಿಂದ ಪೊಲೀಸ್ ಫೋರ್ಸ್ ಆಗಮಿಸಿದೆ.
ಕೆ.ಎಸ್.ಆರ್.ಪಿ, ಸಿಎಆರ್, ಆರ್.ಎ.ಎಫ್ ತುಕಡಿಗಳಿಂದ ಭದ್ರತೆ ಇದೆ. ಮಂಗಳೂರು ಗೋಲಿಬಾರ್ ಪ್ರಕರಣದ ಬಳಿಕ ನಡೆಯಲಿರುವ ಮೊದಲ ಸಮಾವೇಶ ಇದಾಗಿದೆ. ಇನ್ನು ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಳೆ ಸಂಚಾರ ಬದಲಾವಣೆ ಮಾಡಲಾಗಿದೆ. ನಾಳೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಂಚಾರ ಬದಲಾವಣೆ ಮಾಡಲಾಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಬರುವ ವಾಹನಗಳು ಮೆಲ್ಕಾರ್, ಕೊಣಾಜೆ, ತೊಕ್ಕೊಟ್ಟು ಮೂಲಕ ಮಂಗಳೂರಿಗೆ ಹೋಗಬೇಕು. ಮಂಗಳೂರಿನಿಂದ ಬೆಂಗಳೂರು ಕಡೆ ಸಾಗುವ ವಾಹನಗಳು ಪಂಪ್ ವೆಲ್, ತೊಕ್ಕೊಟ್ಟು, ಕೊಣಾಜೆ, ಬಿ.ಸಿ.ರೋಡ್ ಮೂಲಕ ಬೆಂಗಳೂರಿಗೆ ಹೋಗಬೇಕು. ಉಡುಪಿಯಿಂದ ಬೆಂಗಳೂರು ಕಡೆಗೆ ಪಡುಬಿದ್ರೆ, ಕಾರ್ಕಳ, ಧರ್ಮಸ್ಥಳ, ಶಿರಾಡಿ ಮೂಲಕ ಹೋಗಬೇಕು. ಬಿ.ಸಿ.ರೋಡ್, ಕೈಕಂಬ, ಪೊಳಲಿ ಮೂಲಕವೂ ಮಂಗಳೂರು ಸಂಪರ್ಕಿಸಲು ಪರ್ಯಾಯ ಅವಕಾಶ ಮಾಡಿಕೊಡಲಾಗಿದೆ.