ಶಿಕ್ಷಣ ಇಲಾಖೆಯಲ್ಲಿನ ಸಮಸ್ಯೆಗಳ ಸ್ಪಂದನೆಗೆ ಉಚಿತ ಸಹಾಯವಾಣಿ: ಎಸ್.ಸುರೇಶ್ ಕುಮಾರ್

ಉಡುಪಿ: ಶಿಕ್ಷಣ ಇಲಾಖೆಯಲ್ಲಿನ ಕುಂದು ಕೊರತೆ ಮತ್ತು ಸಮಸ್ಯೆಗಳನ್ನು ಆಲಿಸಲು ಮಾರ್ಚ್ 31 ರಂದು 24×7 ಉಚಿತ ಸಹಾಯವಾಣಿಯನ್ನು ಪ್ರಾರಂಭಿಸಲಾಗುವುದು ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಅವರು ಸೋಮವಾರ, ಉಡುಪಿ ಜಿಲ್ಲೆಯ ಮಣೂರು-ಪಡುಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ನೂತನ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳು, ಆಗಬೇಕಾಗಿರುವ ಸುಧಾರಣೆಗಳು, ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಶಿಕ್ಷಕರು, ಸಾರ್ವಜನಿಕರು, ಪೋಷಕರು, ವಿದ್ಯಾರ್ಥಿಗಳು ಈ ಸಹಾಯವಾಣಿಯ ಮೂಲಕ ಪರಿಹಾರ ಪಡೆಯಲು ಹಾಗೂ ಸಲಹೆ ನೀಡಬಹುದಾಗಿದ್ದು, ಮಾರ್ಚ್ 31 ರಂದು ರಾಜ್ಯಾದ್ಯಂತ ಈ ಸಹಾಯವಾಣಿ ಆರಂಭವಾಗಲಿದೆ ಎಂದ ಸಚಿವ ಸುರೇಶ್ ಕುಮಾರ್,   ರಾಜ್ಯದಲ್ಲಿನ ಸರಕಾರಿ ಶಾಲೆಗಳ ಅಭಿವೃದ್ಧಿಗಾಗಿ ತಮ್ಮಿಂದಾದ ಕೊಡುಗೆ ನೀಡಲು ತಯಾರಿರುವ ದಾನಿಗಳು ಮತ್ತು ಬಿಡುವಿನ ಅವಧಿಯಲ್ಲಿ ಸರಕಾರಿ ಶಾಲೆಗಳಲ್ಲಿ ಸ್ವಯಂಪ್ರೇರಿತರಾಗಿ ಪಾಠಮಾಡುವ ಸೇವಾ ಮನೋಭಾವ ಹೊಂದಿರುವವರಿಗೆ ಸಹಾಯವಾಗುವಂತೆ ಆ್ಯಪ್ ಅನ್ನು ಅಭಿವೃದ್ದಿಪಡಿಸಲಾಗುತ್ತಿದ್ದು, ಈ ಆ್ಯಪ್ ಮೂಲಕವೇ ಅವರಿಗೆ ಅಗತ್ಯ ಅನುಮತಿಯನ್ನು ನೀಡುವ ಕಾರ್ಯಕ್ಕೆ ಮುಂದಿನ ಶೈಕ್ಷಣಿಕ ವರ್ಷದಿಂದ ಚಾಲನೆ ನೀಡಲಾಗುವುದು. ರಾಜ್ಯದಲ್ಲಿ ಶಾಲಾ ಮಕ್ಕಳ ಬ್ಯಾಗ್ ತೂಕ ಕಡಿಮೆ ಮಾಡುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಶಾಲೆಗಳಲ್ಲಿ ಪ್ರತಿ ತಿಂಗಳು 2 ದಿನ ಬ್ಯಾಗ್ ರಹಿತ ದಿನ ಆಚರಿಸುವ ಮೂಲಕ ಮಕ್ಕಳಿಗೆ ಇತರೇ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರೇಪಿಸಲಾಗುವುದು ಎಂದು ಸಚಿವರು ತಿಳಿಸಿದರು.

ಶಿಕ್ಷಕರು ಮಾತೃಹೃದಯ ಹೊಂದಿರಬೇಕು ಎಂದ ಸಚಿವರು, ಶಾಲಾ ಅವಧಿಯಲ್ಲಿ ಯಾವುದೇ ಶಿಕ್ಷಕರು ಮೊಬೈಲ್ ಬಳಸುವಂತಿಲ್ಲ ಮತ್ತು ಮಕ್ಕಳ ವೀಡಿಯೋ ಮಾಡುವಂತಿಲ್ಲ. ಇದನ್ನು ಉಲ್ಲಂಘಿಸುವ ಶಿಕ್ಷಕರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.

ಕೇವಲ ಶಿಕ್ಷಣ ನೀಡುವುದು, ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಆದ್ಯತೆಯಾಗಿರಬಾರದು, ಮೌಲ್ಯಗಳಿಂದ ಕೂಡಿದ ಗುಣಮಟ್ಟದ ಶಿಕ್ಷಣ ನೀಡುವುದು ಗುರಿಯಾಗಿರಬೇಕು. ಶಾಲಾ ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನು ತುಂಬಿ ಅವರನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿದರೆ ಶಿಕ್ಷಣದ ನಿಜವಾದ ಉದ್ದೇಶ ಈಡೇರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಜರಾಯಿ, ಬಂದರು ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ ಶ್ರೀಧರ್ ಆಚಾರ್, ಡಿ.ಡಿ.ಪಿ.ಐ ಶೇಷಶಯನ ಕಾರಿಂಜ, ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಓ.ಆರ್.ಪ್ರಕಾಶ್, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್.ಸಿ.ಕುಂದರ್, ಸರಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ಐತಾಳ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಂತಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಪ್ರಕಾಶ್ ತೋಳಾರ್ ಮತ್ತಿತರರು ಉಪಸ್ಥಿತರಿದ್ದರು.

ಕ್ರೀಡಾ ವಿಭಾಗದಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.