ಪೇಜಾವರ ಶ್ರೀಗಳ ಮಹಾಸಮಾರಾಧನೋತ್ಸವ; ಪರಿಶಿಷ್ಟ ಜನರ ಕಾಲೊನಿಯಲ್ಲಿ ಅನ್ನದಾನ

ಉಡುಪಿ: ಪೇಜಾವರ ಶ್ರೀ ವಿಶ್ವೇಶ ತೀರ್ಥಶ್ರೀಪಾದರ ಮಹಾ ಸಮಾರಾಧನೋತ್ಸವದ‌ ಪ್ರಯುಕ್ತ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠ ಉಡುಪಿ, ಶ್ರೀಕೃಷ್ಣ ಮಠ, ಶ್ರೀ ಪೇಜಾವರ ಮಠ ಸೇರಿದಂತೆ ದೇಶಾದ್ಯಂತ ಇರುವ ಪೇಜಾವರ ಮಠದ ಶಾಖೆಗಳು, ಅತಿಥಿಗೃಹ, ಶಾಲೆ ಕಾಲೇಜು ಅನಾಥಾಶ್ರಮ ಸೇವಾಧಾಮ ವಿದ್ಯಾರ್ಥಿನಿ ನಿಲಯಗಳೂ ಸೇರಿದಂತೆ 85 ಕ್ಕೂ ಅಧಿಕ ಕಡೆಗಳಲ್ಲಿ ಗುರುವಾರ ವಿವಿಧ ಧಾರ್ಮಿಕ ವಿಧಿವಿಧಾನಗಳು‌, ಸಾಮೂಹಿಕ ಅನ್ನಾರಾಧನೆ ವಿದ್ವತ್ ಗೋಷ್ಠಿ ವೈಭವದಿಂದ ನೆರವೇರಿತು.

ಉಡುಪಿ ಪೇಜಾವರ ಮಠದಲ್ಲಿಯೂ ಬೆಳಿಗ್ಗೆ ಪವಮಾನ ಹೋಮ, ಭಜನೆ, ಪಾರಾಯಣ, ಪಾದುಕಾ ಪೂಜಾ ಮಹಾಪೂಜೆ ಸಾವಿರಕ್ಕೂ ಅಧಿಕ ಜನರ ಅನ್ನಾರಾಧನೆಗಳು ನಡೆದವು. ಶ್ರೀಗಳ ಆಸನದಲ್ಲಿ ಭಾವಚಿತ್ರ, ಪಾದುಕೆಗಳನ್ನಿಟ್ಟು ರಜತ ಮಂಟಪ ಸಹಿತ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಪದ್ಮನಾಭ ಭಟ್ ಕಿದಿಯೂರು ಧಾರ್ಮಿಕ ವಿಧಿ ಗಳನ್ನು ನೆರವೇರಿಸಿದರು. ವ್ಯವಸ್ಥಾಪಕರಾದ ವಾಸುದೇವ ಅಡಿಗ, ಇಂದು ಶೇಖರ , ಕೊಟ್ಟಾರಿಗಳಾದ ಸಂತೋಷ್ ಆಚಾರ್ಯ ವ್ಯವಸ್ಥೆಯಲ್ಲಿ ಸಹಕರಿಸಿದರು.
ಇದೇ ಸಂದರ್ಭದಲ್ಲಿ ಸಮಾಜದಲ್ಲಿ ಬೇರುಬಿಟ್ಡಿರುವ ಅಸೃಶ್ಯತೆಯ ನಿವಾರಣೆಗಾಗಿ ಪೇಜಾವರ ಶ್ರೀಗಳು ಕ್ರಾಂತಿಕಾರಿ ಕರ್ತವ್ಯವನ್ನು ಸ್ಮರಿಸುವ ಸಲುವಾಗಿ ಉಡುಪಿಯ ಕರಂಬಳ್ಳಿಯಲ್ಲಿ ಪರಿಶಿಷ್ಡ ಜಾತಿ ಜನರ ಕಾಲೊನಿಯಲ್ಲಿ ಶ್ರೀಗಳ ಸಂಸ್ಮರಣೆ ಸಹಿತ ಸಾಮೂಹಿಕ ಅನ್ನದಾನ ನೆರವೇರಿತು.

ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಸೂಚನೆಯಂತೆ ವಾಸುದೇವ ಭಟ್ ಪೆರಂಪಳ್ಳಿ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.
ಮುಚ್ಲುಕೋಡು ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪಕ ರಾಜಶೇಖರ ಭಟ್, ಅರುಣ್ ಭಟ್ ಉದ್ಯಮಿ ಭುವನೇಂದ್ರ ಕಿದಿಯೂರು ನಗರಸಭಾ ಸದಸ್ಯ ಗಿರಿಧರ ಆಚಾರ್ಯ,  ಸಾಮಾಜಿಕ ಕಾರ್ಯಕರ್ತರಾದ ಸತೀಶ್ ಕುಮಾರ್ ಪ್ರಶಾಂತ್ ಶೆಟ್ಟಿ, ಅಂಜಾರು , ಕಿಶೋರ್ ಸಾಲ್ಯಾನ್ ಮೊದಲಾದವರು ವಿಶೇಷ ಸಹಕಾರ ನೀಡಿದರು.
ಸುಮಾರು 200 ಮಂದಿ ಉಪೇಕ್ಷಿತ ಬಂಧುಗಳು ಭೋಜನ ಸ್ವೀಕರಿಸಿದರು.