ಸಿನಿಮಾ ದೊಡ್ಡ ಉದ್ಯಮವಾಗಿ ಬೆಳೆದಿದೆ: ಡಾ.ಎಂ.ಜಿ.ವಿಜಯ

ಉಡುಪಿ: ಮನೋರಂಜನೆಗಾಗಿ ಆರಂಭವಾದ ಸಿನಿಮಾ ಇಂದು ದೊಡ್ಡ ಉದ್ಯಮವಾಗಿ ಬೆಳೆದಿದೆ ಎಂದು ಉಡುಪಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ. ವಿಜಯ ಹೇಳಿದರು.
ರಂಗಭೂಮಿ ಉಡುಪಿ ಸಂಸ್ಥೆಯ ವತಿಯಿಂದ ಪುಣೆಯ ಫಿಲ್ಮ್‌, ವಿಡಿಯೋ ಟೆಕ್ನಾಲಜಿ ಸಂಸ್ಥೆಯ ಸಹಭಾಗಿತ್ವದಲ್ಲಿ ಆಯೋಜಿಸಿದ್ದ 9 ದಿನಗಳ ಚಲನಚಿತ್ರ ತಯಾರಿಕಾ ಕಾರ್ಯಾಗಾರಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಯಾವುದೇ ವಿದ್ಯೆ ಸುಲಭವಾಗಿ ಒಲಿಯಲ್ಲ, ಅದರಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಾಗ ಮಾತ್ರ ಅದು ನಮಗೆ ಒಲಿಯುತ್ತದೆ. ಅಭಿನಯ ಎಂಬುವುದು ಕೂಡ ಹಾಗೆ. ಅದರೊಳಗೆ ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರೆ ಉತ್ತಮ ನಟನಾಗಿ ಹೊರಹೊಮ್ಮಬಹುದು ಎಂದರು.
ಸಿನಿಮಾದಿಂದ ಜನರು ಹಾಳುಗುತ್ತಾರೆ ಎನ್ನುವುದು ತಪ್ಪುಕಲ್ಪನೆ. ಸಿನಿಮಾದಲ್ಲಿ ಒಳ್ಳೆಯದು ಇದೆ, ಕೆಟ್ಟದ್ದು ಇದೆ. ಆದರೆ ಒಳ್ಳೆಯ ವಿಚಾರಗಳನ್ನು ಆಯ್ಕೆ ಮಾಡುವುದು ಜನರಿಗೆ ಬಿಟ್ಟಿದ್ದು. ಸಿನಿಮಾ ತರಬೇತಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ
ಸೃಜನಶೀಲತೆಯನ್ನು ಹೆಚ್ಚಿಸಿಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ಹಾರೈಸಿದರು.
ಪುಣೆಯ ಫಿಲ್ಮ್‌, ವಿಡಿಯೋ ಟೆಕ್ನಾಲಜಿ ಸಂಸ್ಥೆಯ ಮುಖ್ಯಸ್ಥ ಎಂ.ಕೆ.  ಶಂಕರ್‌ ಮಾತನಾಡಿ, ಈ ಕಾರ್ಯಾಗಾರ ಎರಡು ಬ್ಯಾಚ್‌ಗಳಲ್ಲಿ ನಡೆಯಲಿದೆ. ಮೊದಲನೇಯ ಬ್ಯಾಚ್‌‌ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆವರೆಗೆ ಉಡುಪಿ ಹಿಂದಿ ಪ್ರಚಾರ ಸಮಿತಿ ಭವನದಲ್ಲಿ ಹಾಗೂ ಎರಡನೇ ಬ್ಯಾಚ್‌ ಸಂಜೆ 5ರಿಂದ 9ರ ವರೆಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಚಿತ್ರ ನಿರ್ದೇಶಕ ಪಿ.ಎಂ. ರಾಮಚಂದ್ರ, ಮುಂಬೈ ಫಿಲ್ಮ್‌ ಇನ್ಸ್‌ಸ್ಟಿಟ್ಯೂಟ್‌ ಬ್ರಿಜೇಶ್‌ ಕುಮಾರ್‌ ಉಪಸ್ಥಿತರಿದ್ದರು.
ರಂಗಭೂಮಿಯ ಉಪಾಧ್ಯಕ್ಷ ನಂದಕುಮಾರ್‌ ಸ್ವಾಗತಿಸಿದರು. ಲೇಖಕಿ ಪೂರ್ಣಿಮಾ ಸುರೇಶ್‌
ವಂದಿಸಿದರು. ಶ್ರೀಪಾದ್‌ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.