ಪೌರತ್ವ ಕಾಯ್ದೆಯನ್ನು ಸ್ವಾತಂತ್ರ್ಯ ಬಂದಾಗಲೇ ಜಾರಿಗೊಳಿಸಬೇಕಿತ್ತು: ಬಸವರಾಜ ಬೊಮ್ಮಾಯಿ

ಉಡುಪಿ: ಪೌರತ್ವ ಕಾಯ್ದೆಯನ್ನು ಭಾರತಕ್ಕೆ ಸ್ವಾತಂತ್ರ್ಯ ಬಂದ ಕೂಡಲೇ ಜಾರಿಗೊಳಿಸಬೇಕಿತ್ತು. ಆದರೆ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಅದು ಅನುಷ್ಠಾನಗೊಂಡಿರಲಿಲ್ಲ. 70 ವರ್ಷದ ಬಳಿಕ ಮೋದಿಯವರು ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಉಡುಪಿ ನಗರ ಬಿಜೆಪಿ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಮಣಿಪಾಲದ ಟೈಗರ್‌ ಸರ್ಕಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮಹಾತ್ಮಗಾಂಧಿ ಧರ್ಮ, ನೆಹರು ಕರ್ತವ್ಯ ಹಾಗೂ ಇಂದಿರಾಗಾಂಧಿಯವರು ಮಾನವೀಯ ನೆಲೆಯಲ್ಲಿ ಜಾರಿಗೊಳಿಸಬೇಕೆಂದು ನಿರ್ಧರಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಈಗ ಆ ಮೂವರ ಆಶಯಗಳನ್ನು ಮೋದಿ ಸರ್ಕಾರ ಜಾರಿಗೊಳಿದೆ.‌ ಇದರಿಂದ ಮುಸ್ಲಿಮರು ಸೇರಿದಂತೆ ಯಾವುದೇ ಸಮುದಾಯಕ್ಕೆ ತೊಂದರೆ ಇಲ್ಲ. ಭವ್ಯ ಭಾರತದ ನಿರ್ಮಾಣಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ವಿರೋಧ ಪಕ್ಷಗಳು ಜನರನ್ನು ತಪ್ಪು ದಾರಿಗೆ ಎಳೆದು, ಮನಸ್ಸನ್ನು ಒಡೆದು ಧರ್ಮದ ವಿಷ ಬೀಜ ಬಿತ್ತಿ ತನ್ನ ರಾಜಕೀಯ ಬೆಳೆ ಬೇಯಿಸುವ ಕೆಲಸ ಮಾಡುತ್ತಿದೆ. ಕಾಯ್ದೆಯ ಬಗ್ಗೆ ಜನರಿಗೆ ತಪ್ಪು ಮಾಹಿತಿಯನ್ನು ರವಾನಿಸುತ್ತಿದೆ. ಹಾಗಾಗಿ ಯಾರು ತಪ್ಪು ಮಾಹಿತಿಗಳಿಗೆ ಕಿವಿಗೊಡಬಾರದು ಎಂದು ಹೇಳಿದರು.
ಶಾಸಕರಾದ ಸುನಿಲ್‌ ಕುಮಾರ್‌, ಕೆ. ರಘುಪತಿ ಭಟ್‌, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖಂಡರಾದ ಮಹೇಶ್‌ ಠಾಕೂರ್‌, ಪ್ರಭಾಕರ ಪೂಜಾರಿ, ಕಲ್ಪನಾ ಸುಧಾಮ, ದಾವೂದ್‌ ಅಬೂಬಕ್ಕರ್‌, ಉಪೇಂದ್ರ ನಾಯಕ್‌, ಜಗದೀಶ್‌ ಆಚಾರ್ಯ, ಸಲೀಂ ಅಂಬಾಗಿಲು ಉಪಸ್ಥಿತರಿದ್ದರು. ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿದರು.