ಮೂಡುಬಿದಿರೆ: 80ನೇ ಅಖಿಲಭಾರತ ವಿಶ್ವವಿದ್ಯಾಲಯದ ಕ್ರೀಡಾಕೂಟದ ಎರಡನೇ ದಿನವಾದ ಶುಕ್ರವಾರ ಮೊದಲನೇ ದಿನ ಹಾಗೂ ಎರಡನೇ ದಿನದಂದು ವಿಜೇತರಾದ ಕ್ರೀಡಾರ್ಥಿಗಳಿಗೆ ವಿಜಯ ವೇದಿಕೆಯಲ್ಲಿ ಪದಕ ಪ್ರದಾನಿಸಿ ಗೌರವಿಸಲಾಯಿತು.
ವಿಜೇತ ಕ್ರೀಡಾಪಟುಗಳಿಗೆ ಮಾಜಿ ಸಚಿವ ಅಭಯಚಂದ್ರ ಜೈನ್, ಮೂಡುಬಿದಿರೆ ಪಂಡಿತ್ ರೆಸಾರ್ಟ್ ಮಾಲೀಕ ಲಾಲ್ ಗೋಯಲ್ ಹಾಗೂ ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ನ ಸಂಘಟನಾ ಕಾರ್ಯದರ್ಶಿ ಬಾಬುಶೆಟ್ಟಿ ಸೇರಿದಂತೆ ಗಣ್ಯರು ಪದಕ ವಿತರಿಸಿದರು. ವಿಜೇತರಿಗೆ ಹಾಗೂ ನೂತನ ಕೂಟ ದಾಖಲೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ನೀಡಿ ಪುರಸ್ಕರಿಸಲಾಯಿತು.
ವಿಜಯವೇದಿಕೆಯಲ್ಲಿ ಗಮನ ಸೆಳೆದ ಫತೇ ಬ್ಯಾಂಡ್
ಅಥ್ಲೇಟಿಕ್ ಚಾಂಪಿಯನ್ಶಿಪ್ನ ಪದಕ ವಿತರಣಾ ಸಮಾರಂಭದ ಪ್ರಮುಖ ಆಕರ್ಷಣೆ ಪಂಜಾಬಿನ ಬತ್ತಿಂಡ ಪ್ರದೇಶದ ಫತೇಹ್ ಆರ್ಮಿ ಬ್ಯಾಂಡ್ (ಬತಿಂಡ ಆರ್ಮಿ ಪೈಪ್ ಬ್ಯಾಂಡ್). ಈ ಬ್ಯಾಂಡಿನ ಮೂಲಕ ಅತಿಥಿ ಗಳನ್ನು ವಿಶೇಷವಾಗಿ ಸ್ವಾಗತಿಸಿದ ರೀತಿ ಗಮನ ಸೆಳೆದಿದೆ. ಮುಖ್ಯ ಅಥಿತಿಗಳನ್ನು ವೇದಿಕೆಯ ಮುಂಭಾಗಕ್ಕೆ ಕರೆತಂದು ಮೂರು ವಿಭಿನ್ನ ಬಣ್ಣದ ವಸ್ತ್ರವನ್ನು ತಲೆಯ ಮೇಲೆ ಹಿಡಿದು ಬ್ಯಾಂಡ್ನೊಟ್ಟಿಗೆ ಶಿಸ್ತುಬದ್ಧವಾಗಿ ತಿರುಗಿ ಗೌರವ ಸೂಚಿಸುವ ರೀತಿ ಬಹಳ ವಿಭಿನ್ನವಾಗಿದೆ.
ಕ್ರೀಡಾಕೂಟಕ್ಕೆ ಸಾಂಸ್ಕøತಿಕ ಸಿಂಚನ
ಸಂಜೆ ಪದಕ ವಿತರಣಾ ಸಮಾರಂಭಕ್ಕೆ ಸಾಂಸ್ಕøತಿಕ ಕಾರ್ಯಕ್ರಮ ಸಾಥ್ ನೀಡುತ್ತಿವೆ. ಶುಕ್ರವಾರ ಸುಮಾರು 2 ಗಂಟೆಗಳ ಕಾಲ ಸಾಂಸ್ಕøತಿಕ ಕಾರ್ಯಕ್ರಮ ನೀಡಿದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಭರತನಾಟ್ಯ, ಬಂಜಾರ, ಮಣಿಪುರದ ಸ್ಟಿಕ್ ಡ್ಯಾನ್ಸ್ ಹಾಗೂ ಮಲ್ಲಕಂಬ ಸಾಹಸವನ್ನು ಪ್ರಸ್ತುತಪಡಿಸಿದರು. ಮಂಗಳೂರಿನ ಜ್ಞಾನ ಐತಾಳ್ ನೇತೃತ್ವದ ಹೆಜ್ಜೆನಾದ ತಂಡದ ಬಾಲಿವುಡ್ ಶೈಲಿಯ ನೃತ್ಯ ನೋಡುಗರನ್ನು ರಂಜಿಸಿತು.