ಉಡುಪಿ: ಶಬರಿಮಲೆ ದೇಗುಲಕ್ಕೆ ಇಬ್ಬರು ಮಹಿಳೆಯರನ್ನು ಪ್ರವೇಶಿಸಲು ಸಹಕರಿಸಿ ಹಿಂದು ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ ಕೇರಳ ರಾಜ್ಯ ಸರಕಾರದ ವಿರುದ್ಧ ಉಡುಪಿ ಜಿಲ್ಲಾ ಶಬರಿಮಲೆ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಬಿಜೆಪಿ, ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ನಗರದ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.
ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಯ್ಯಪ್ಪ ಭಕ್ತಾದಿಗಳು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕೇರಳ ಸರಕಾರ ಇಬ್ಬರು ಮಹಿಳೆಯರಿಗೆ ಶಬರಿಮಲೆ ದೇಗುಲಕ್ಕೆ ಪ್ರವೇಶಿಸಲು ಅವಕಾಶಕೊಟ್ಟಿರುವುದನ್ನು ಖಂಡಿಸಿದರು. ಸಮಾನತೆಯ ಹೆಸರಿನಲ್ಲಿ ಹಿಂದೂ ಧರ್ಮದ ಸಾಂಪ್ರದಾಯವನ್ನು ದಮನಿಸುವುದು ಸರಿಯಲ್ಲ. ನೂರಾರು ವರ್ಷಗಳಿಂದ ಆರಾಧಿಸಿಕೊಂಡು ಬರಲಾಗುತ್ತಿದ್ದ ಪದ್ಧತಿಯನ್ನು ಷಡ್ಯಂತ್ರದ ಮೂಲಕ ಮುರಿಯಲು ಪ್ರಯತ್ನಿಸಿರುವುದು ಹಿಂದೂ ಧರ್ಮದಕ್ಕೆ ಮಾಡಿದ ಘನಘೋರ ಅಪಚಾರ. ಇದನ್ನು ಹಿಂದೂಗಳು ಸಹಿಸಿಕೊಂಡು ಕೂರಲು ಸಾಧ್ಯವೇ ಇಲ್ಲ ಎಂದು ಕೇರಳ ಸರಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವ ಹಿಂದೂ ಪರಿಷತ್ ಮುಖಂಡ ಮಂಜುನಾಥ ಸ್ವಾಮಿ ಮಾತನಾಡಿ, ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶದಿಂದ ಆಘಾತ ಆಗಿದೆ. ಇದರಿಂದ ಹಿಂದೂ ಸಮಾಜಕ್ಕೆ ಅನ್ಯಾಯವಾಗಿದೆ. ಇದನ್ನು ಕೇರಳ ಸರಕಾರ ಅನುಷ್ಠಾನಗೊಳಿಸಿರುವುದು ಖಂಡನೀಯ. ಈ ವೈಚಾರಿಕ ದಾಳಿಯ ಹಿಂದೆ ಮತೀಯ ಶಕ್ತಿಗಳ ಕೈವಾಡವಿದೆ. ಇದನ್ನು ಹಿಂದೂ ಧರ್ಮ ಸಹಿಸಿಕೊಳ್ಳುವುದಿಲ್ಲ ಎಂದು ಕಿಡಿಕಾರಿದರು.
ಬಾಲಗುರು ಸ್ವಾಮಿ ಮಾತನಾಡಿ, ಕೇರಳ ಕಮ್ಯೂನಿಸ್ಟ್ ಸರಕಾರ ಹಿಂದೂ ಧರ್ಮಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದೆ. ಷಡ್ಯಂತ್ರದ ಮೂಲಕ ಹಿಂದೂ ಧರ್ಮವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಇದನ್ನು ಹೀಗೆ ಮುಂದುವರಿಯಲು ಬಿಡಬಾರದು. ಬೀದಿಗಳಿದು ಪ್ರತಿಭಟನೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ನ್ಯಾಯಾಲಯದ ಬಗ್ಗೆ ವಿಶ್ವಾಸ ಗೌರವವಿದೆ. ಆದರೆ ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟಾದಾಗ ಅದನ್ನು ಸಹಿಸಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಕಾನೂನಿನಲ್ಲಿ ಮಹಿಳೆಯರು ಪುರುಷರು ಸಮಾನರು. ನಂಬಿಕೆ ವಿಚಾರದಲ್ಲಿ ಅದೆಲ್ಲ ಮುಖ್ಯವಾಗಲ್ಲ ಎಂದರು.
ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಸದಸ್ಯೆ ಗೀತಾಂಜಲಿ ಸುವರ್ಣ, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ನಗರಸಭಾ ಸದಸ್ಯರಾದ ರಜನಿ ಹೆಬ್ಬಾರ್, ಸುಮಿತ್ರಾ ನಾಯಕ್, ಮಂಜುನಾಥ್ ಮಣಿಪಾಲ, ಗಿರೀಶ್ ಅಂಚನ್, ವಿವಿಧ ಸಂಘಟನೆಗಳ ಮುಖಂಡರಾದ ಬಾಲಕೃಷ್ಣ ಗುರುಸ್ವಾಮಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ವಿಲಾಸ್ ನಾಯಕ್, ಕಿರಣ್ ಕುಮಾರ್, ಸುನಿಲ್ ಕೆ.ಆರ್., ದಿನೇಶ್ ಮೆಂಡನ್, ರಶ್ಮಿ ಬಾಲಕೃಷ್ಣ ಶೆಟ್ಟಿ, ಶಾಮಲ ಕುಂದರ್, ಕಟಪಾಡಿ ಶಂಕರ ಪೂಜಾರಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.