ಉಡುಪಿ ಜಿಲ್ಲೆ ಎದುರಿಸುತ್ತಿರುವ ಅಂತರ್ಜಲ ಸಮಸ್ಯೆ ಮತ್ತು ಪರಿಹಾರ: ಕಾರ್ಯಾಗಾರ ಉದ್ಘಾಟನೆ

ಉಡುಪಿ:  ದೇಶವನ್ನು ಕಾಡುತ್ತಿರುವ ಅಂತರ್ಜಲದ ಸಮಸ್ಯೆ ಮತ್ತು ಅದರ ನಿರ್ವಹಣೆಗೆ  ಬಾಹ್ಯಾಕಾಶ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ ಎಂದು ಇಸ್ರೋ ವಿಜ್ಞಾನಿ ಡಾ. ದಿವಾಕರ್ ಪಿ.ಜಿ. ಅಭಿಪ್ರಾಯಪಟ್ಟಿದ್ದಾರೆ.

ಉಡುಪಿ ವಾಟರ್ ಫೌಂಡೇಶನ್  ಮತ್ತು ಮಣಿಪಾಲದ ಎಂಐಟಿಯ  ಸಹಯೋಗದೊಂದಿಗೆ ಉಡುಪಿ ಜಿಲ್ಲೆ ಎದುರಿಸುತ್ತಿರುವ ಅಂತರ್ಜಲ ಸಮಸ್ಯೆ ಮತ್ತು ಪರಿಹಾರ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಸ್ರೋ ಜಗತ್ತಿನಲ್ಲೇ ಅತ್ಯಂತ ಯಶಸ್ವಿ ರಾಕೆಟ್ ತಂತ್ರಜ್ಞಾನವನ್ನು ಹೊಂದಿದ್ದು, ಭೂಮಿಯಿಂದ 500 ರಿಂದ 900 ಕಿಲೋ ಮೀಟರ್ ಎತ್ತರದಲ್ಲಿ ಸುತ್ತುತ್ತಿರುವ ಉಪಗ್ರಹದಿಂದ ಭೂಮಿಯ ಆಳದ ಸ್ಪುಟವಾದ ಚಿತ್ರಗಳನ್ನು ತೆಗೆಯಬಹುದಾಗಿದೆ ಇದರಿಂದಾಗಿ ಭೂಮಿಯ ಆಳದಲ್ಲಿ ನೀರಿನ ಹರಿವನ್ನು ಮತ್ತು ನೀರಿಲ್ಲದ ಭಾಗಗಳನ್ನು ಪತ್ತೆ ಹಚ್ಚಿ ಅದಕ್ಕನುಗುಣವಾಗಿ ಅಂತರ್ಜಲ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬಹುದಾಗಿದೆ ಎಂದು ದಿವಾಕರ್ ಹೇಳಿದರು.

ಈಗಾಗಲೇ ಇಸ್ರೋ ಉಡಾಯಿಸಿದ ಉಪಗ್ರಹಗಳ ಮೂಲಕ ಇಡೇ ದೇಶದ ಭೂಭಾಗದ ಮ್ಯಾಪಿಂಗ್ ಮಾಡಲಾಗಿದೆ. ಇದು ಅಂತರ್ಜಲ ಅಭಿವೃದ್ದಿ ಯೋಜನೆಗಳಿಗೆ ಸಹಕಾರಿಯಾಗಲಿದೆ ಎಂದು ಡಾ. ದಿವಾಕರ್ ಹೇಳಿದರು . ಇದೇ ವೇಳೆ ಅವರು ಉಡುಪಿ ಜಿಲ್ಲೆಯ ಭೂಭಾಗದ ಉಪಗ್ರಹ ಚಿತ್ರದ ಮೂಲಕ ವಿವರಣೆಯನ್ನು ನೀಡಿದರು.

ಆರ್ಟ್ ಆಫ್ ಲಿವಿಂಗ್ ಇದರ ನದಿ ಪುನಸ್ಚೇತನ ಯೋಜನೆಯ ರಾಷ್ಟ್ರೀಯ ನಿರ್ದೇಶಕ ಡಾ ಲಿಂಗರಾಜು, ಉಡುಪಿ ಜಿಲ್ಲೆಯ ನೀರಿನ ಸಮಸ್ಯೆಗೆ  ಕಾರಣ ಮತ್ತು ಪರಿಹಾರ ಕುರಿತಂತೆ ಪರಿಣಿತರ ತಂಡ ಅಧ್ಯಯನ ಕೈಗೊಳ್ಳಲಿದೆ ಎಂದರು.       ಬೆಂಗಳೂರಿನ ಉದ್ಯಮಿ ಪ್ರತಾಪ್ ಹೆಗ್ಡೆ, ಎಂಐಟಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಬಾಲಕೃಷ್ನ ರಾವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಡಾ.ಪಿ.ವಿ ಭಂಡಾರಿ ಸ್ವಾಗತಿಸಿದರು. ನಾರಾಯಣ್ ಶೆಣೈ ಪ್ರಸ್ತಾವನೆ ಮಾಡಿದರು. ಜಿಲ್ಲೆಯ ವಿವಿದೆಡೆಯಿಂದ ಪರಿಸರಾಸಕ್ತರು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು