ಬ್ರಹ್ಮಾವರದಲ್ಲಿ ನವೆಂಬರ್‌.27 ರಿಂದ ಉಡುಪಿ ಆಹಾರ ಮತ್ತು ಉದ್ಯಮ ಮೇಳ: ಇಲ್ಲಿದೆ ಕರಾವಳಿಯ ಸಂಸ್ಕೃತಿ‌ ಮತ್ತು ಸೊಗಡಿನ ಬೃಹತ್ ಲೋಕ

ಬ್ರಹ್ಮಾವರ: ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಹಾಗೂ ಮಾರಾಟಗಾರರ ಸಂಘದ ದಶಮಾನೋತ್ಸವದ ಅಂಗವಾಗಿ ನವೆಂಬರ್ 27ರಿಂದ 29ರವರೆಗೆ ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಉಡುಪಿ ಆಹಾರ ಮತ್ತು ಉದ್ಯಮ ಮೇಳ ನಡೆಯಲಿದೆ.

ಮೂರು ದಿನಗಳ ಕಾಲ ಪ್ರತಿದಿನ ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ನಡೆಯುವ ಮೇಳದಲ್ಲಿ ಆಹಾರೋದ್ಯಮ, ಗೃಹೋಪಯೋಗಿ ವಸ್ತುಗಳು, ಕೃಷಿ ಉತ್ಪನ್ನಗಳು, ಸ್ಥಳೀಯ ಉತ್ಪನ್ನಗಳು ಹಾಗೂ ಕರಾವಳಿಯ ಕಲೆ-ಸಂಸ್ಕೃತಿಗೆ ಆದ್ಯತೆ ನೀಡಲಾಗಿದೆ. ಉದ್ಯಮಿಗಳು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವುದು ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು ಮೇಳದ ಉದ್ದೇಶವಾಗಿದೆ.

ಆಹಾರೋದ್ಯಮಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ಮತ್ತು ಮಾರಾಟ ಮಳಿಗೆಗಳು, ಗೃಹೋಪಯೋಗಿ ವಸ್ತುಗಳು, ಕೃಷಿ ಪ್ರದರ್ಶನ, ಕರಾವಳಿಯ ಸಾಂಪ್ರದಾಯಿಕ ಖಾದ್ಯಗಳ ಆಹಾರ ಮಳಿಗೆಗಳು, ಮನರಂಜನಾ ಆಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿವೆ.

ನವೆಂಬರ್ 27ರಂದು ಸಂಜೆ 4.30ಕ್ಕೆ ಕುಂಜಾಲು ಸರ್ಕಲ್‌ನಿಂದ ಹಳೆ ಬಸ್ ನಿಲ್ದಾಣದ ಮೂಲಕ ಗಾಂಧಿ ಮೈದಾನದವರೆಗೆ ಪುರಮೆರವಣಿಗೆ ನಡೆಯಲಿದೆ.

ಸಂಜೆ 6ಕ್ಕೆ ಅರೆಹೊಳೆ ಪ್ರತಿಷ್ಠಾನದ ನೃತ್ಯೋಪಾಸನೆ ಹಾಗೂ ಮಂಗಳೂರಿನ ನಂದಗೋಕುಲ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸಂಜೆ 6.30ಕ್ಕೆ ಕಾಂಗ್ರೆಸ್ ಮುಖಂಡ ಕೆ. ಜಯಪ್ರಕಾಶ್ ಹೆಗ್ಡೆ ಮೇಳ ಉದ್ಘಾಟಿಸುವರು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಶಾಸಕ ಯಶಪಾಲ್ ಸುವರ್ಣ ಹಾಗೂ ಮನೋಹರ ಶೆಟ್ಟಿ ವಿವಿಧ ಮಳಿಗೆಗಳಿಗೆ ಚಾಲನೆ ನೀಡುವರು.

ರಾತ್ರಿ 7ಕ್ಕೆ ನಡೆಯುವ ‘ದಶರುಚಿ-2026’ ಸಭಾ ಕಾರ್ಯಕ್ರಮವನ್ನು ಡಾ. ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದು, ಹೆರಾಲ್ಡ್ ಡಿಸೋಜ ಅಧ್ಯಕ್ಷತೆ ವಹಿಸುವರು.

ನವೆಂಬರ್ 28ರಂದು ಸಂಜೆ 5.45ರಿಂದ ಯಕ್ಷಗಾನ, ನಾಟ್ಯ, ಹಾಸ್ಯ ಸೇರಿದಂತೆ ವಿವಿಧ ಕಲಾ ಪ್ರದರ್ಶನಗಳು ನಡೆಯಲಿವೆ. ರಾತ್ರಿ 8ಕ್ಕೆ ಸಂಘದ ಉಪಾಧ್ಯಕ್ಷ ಸುದೇವ ಶೆಟ್ಟಿ ಅಧ್ಯಕ್ಷತೆಯಲ್ಲಿ ‘ದಶರುಚಿ ಸಿಂಹಾವಲೋಕನ’ ಸಭೆ ನಡೆಯಲಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ ದಿಕ್ಸೂಚಿ ಭಾಷಣ ಮಾಡುವರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸುವರು. ರಾತ್ರಿ 9.30ಕ್ಕೆ ಮಣಿಪಾಲದ ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ‘ವಿನಾದ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ನವೆಂಬರ್ 29ರಂದು ಸಂಜೆ 6ಕ್ಕೆ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 7ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಸಾಧಕರನ್ನು ಸನ್ಮಾನಿಸುವರು.

ಶಾಸಕರಾದ ವಿ. ಸುನಿಲ್ ಕುಮಾರ್, ಎ. ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರುರಾಜ್ ಗಂಟಿಹೊಳೆ ಉಪಸ್ಥಿತರಿರುವರು. ರಾತ್ರಿ 8.30ಕ್ಕೆ ‘ಉಡುಪಿ ಸರಿಗಮಪ’ ಸಂಗೀತ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.

ಆಹಾರೋದ್ಯಮ ಹಾಗೂ ಉದ್ಯಮ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ‘ಆಹಾರೋದ್ಯಮ ರತ್ನ’ ಮತ್ತು ‘ಉದ್ಯಮ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.