ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ 6ರಿಂದ 12ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಜೈವಿಕವಾಗಿ ಕರಗುವ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ವಿತರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ವಿದ್ಯಾರ್ಥಿನಿಯರ ಋತುಚಕ್ರದ ಆರೋಗ್ಯ ಮತ್ತು ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡುವ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆ ಈ ಮಹತ್ವದ ಕ್ರಮ ಕೈಗೊಂಡಿದ್ದು, ಈ ಸಂಬಂಧ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಸುತ್ತೋಲೆ ಹೊರಡಿಸಿದೆ.
ಶಾಲೆಗಳಲ್ಲಿ ವೆಂಡಿಂಗ್ ಯಂತ್ರ ಅಳವಡಿಕೆಗೆ ಸೂಚನೆ
ಸುಪ್ರೀಂ ಕೋರ್ಟ್ 2026ರ ಜನವರಿ 30ರಂದು ನೀಡಿದ ತೀರ್ಪಿನ ಅನುಸಾರ ಈ ಕ್ರಮ ಕೈಗೊಳ್ಳಲಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಎಲ್ಲ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಜೈವಿಕವಾಗಿ ಕರಗುವ ಸ್ಯಾನಿಟರಿ ಪ್ಯಾಡ್ಗಳನ್ನು ಒದಗಿಸಬೇಕು. ಸಾಧ್ಯವಾದಷ್ಟು ಹೆಣ್ಣುಮಕ್ಕಳ ಶೌಚಾಲಯಗಳಲ್ಲಿ ಪ್ಯಾಡ್ ವಿತರಣಾ ವೆಂಡಿಂಗ್ ಯಂತ್ರಗಳನ್ನು ಅಳವಡಿಸಬೇಕು. ತಕ್ಷಣ ಯಂತ್ರಗಳನ್ನು ಅಳವಡಿಸಲು ಸಾಧ್ಯವಾಗದಿದ್ದಲ್ಲಿ ಪ್ರತ್ಯೇಕ ಕೌಂಟರ್ ಅಥವಾ ಜವಾಬ್ದಾರಿಯುತ ಅಧಿಕಾರಿಗಳ ಮೂಲಕ ವಿತರಿಸಬೇಕು ಎಂದು ಸೂಚಿಸಲಾಗಿದೆ.
ಶೌಚಾಲಯ, ನೈರ್ಮಲ್ಯ ವ್ಯವಸ್ಥೆ ಕಡ್ಡಾಯ
ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಗೂ ಸ್ವಚ್ಛವಾದ ಶೌಚಾಲಯ, ನಿರಂತರ ನೀರು ಮತ್ತು ಕೈ ತೊಳೆಯುವ ವ್ಯವಸ್ಥೆ ಕಲ್ಪಿಸಬೇಕು. ಬಳಸಿದ ಸ್ಯಾನಿಟರಿ ಪ್ಯಾಡ್ಗಳ ಸುರಕ್ಷಿತ ವಿಲೇವಾರಿಗೆ ಮುಚ್ಚಳವಿರುವ ಕಸದ ಬುಟ್ಟಿಗಳು ಅಥವಾ ಪರಿಸರ ಸ್ನೇಹಿ ಇನ್ಸಿನರೇಟರ್ಗಳನ್ನು ಅಳವಡಿಸಬೇಕು. ಜತೆಗೆ ಋತುಚಕ್ರದ ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವಂತೆಯೂ ಇಲಾಖೆ ನಿರ್ದೇಶನ ನೀಡಿದೆ.
ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ
ಸರ್ಕಾರದ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸೌಲಭ್ಯಗಳನ್ನು ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸುವ ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.















