ಭಾರತದಿಂದ ನೇಪಾಳಕ್ಕೆ ರೂ.15 ಸಾವಿರ ಕೋಟಿ ಅಭಿವೃದ್ಧಿ ಪ್ಯಾಕೇಜ್, ಪ್ರಧಾನಿ ನರೇಂದ್ರ ಮೋದಿ ಘೋಷಣೆ

ನವದೆಹಲಿ: ಭಾರತಕ್ಕೆ ಎರಡು ದಿನಗಳ ಅಧಿಕೃತ ಭೇಟಿ ನೀಡಿರುವ ನೇಪಾಳದ ಪ್ರಧಾನಿ ಬಾಲೆನ್ ಶಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನೇಪಾಳದ ಪುನರ್ನಿರ್ಮಾಣ ಮತ್ತು ಅಭಿವೃದ್ಧಿಗಾಗಿ 24 ಸಾವಿರ ಕೋಟಿ ನೇಪಾಳಿ ರೂಪಾಯಿ (ಸುಮಾರು 15 ಸಾವಿರ ಕೋಟಿ ಭಾರತೀಯ ರೂಪಾಯಿ) ಮೊತ್ತದ ಬೃಹತ್ ಅಭಿವೃದ್ಧಿ ಸಹಕಾರ ಪ್ಯಾಕೇಜ್ ಘೋಷಿಸಿದ್ದಾರೆ.

ಮಾತುಕತೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, 35 ವರ್ಷದ ಯುವ ಪ್ರಧಾನಿ ಬಾಲೆನ್ ಶಾ ಅವರ ಅಭಿವೃದ್ಧಿ ದೂರದೃಷ್ಟಿಯನ್ನು ಶ್ಲಾಘಿಸಿದರು.

“ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ದ್ವಿಪಕ್ಷೀಯ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಬಾಲೆನ್ ಶಾ ಅವರನ್ನು ಸ್ವಾಗತಿಸಲು ಸಂತೋಷವಾಗುತ್ತಿದೆ. ನೇಪಾಳದ ಜನರು ಅವರಿಗೆ ನೀಡಿರುವ ಐತಿಹಾಸಿಕ ಜನಾದೇಶವು ಆ ದೇಶದ ಹೊಸ ಪೀಳಿಗೆಯ ಆಶಯ ಮತ್ತು ಭರವಸೆಗಳನ್ನು ಪ್ರತಿಬಿಂಬಿಸುತ್ತದೆ. ವಿಶ್ವದ ಅತ್ಯಂತ ಕಿರಿಯ ಪ್ರಧಾನಿಯಾಗಿ ವಿಶ್ವಸಂಸ್ಥೆಯಲ್ಲಿ ಅವರು ಮಾಡಿದ ಭಾಷಣದಲ್ಲೇ ಅವರ ದೂರದೃಷ್ಟಿ ಸ್ಪಷ್ಟವಾಗಿದೆ” ಎಂದು ಮೋದಿ ಹೇಳಿದರು.

ನೇಪಾಳದ ಬೆನ್ನಿಗೆ ಭಾರತ

ಭಾರತ ಮತ್ತು ನೇಪಾಳ ಕೇವಲ ನೆರೆಯ ರಾಷ್ಟ್ರಗಳಲ್ಲ, ಬದಲಾಗಿ ಆಳವಾದ ನಂಬಿಕೆ ಮತ್ತು ಸ್ನೇಹದ ಬಾಂಧವ್ಯ ಹೊಂದಿರುವ ದೇಶಗಳಾಗಿವೆ ಎಂದು ಮೋದಿ ಹೇಳಿದರು.

ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸಿದ ಅವರು, ನೇಪಾಳದ ಪುನರ್ನಿರ್ಮಾಣ ಮತ್ತು ಅಭಿವೃದ್ಧಿಗೆ ಬೆಂಬಲ ನೀಡುವ ಉದ್ದೇಶದಿಂದ 24 ಸಾವಿರ ಕೋಟಿ ನೇಪಾಳಿ ರೂಪಾಯಿಗಳ ಅಭಿವೃದ್ಧಿ ಸಹಕಾರ ಪ್ಯಾಕೇಜ್ ಘೋಷಿಸಿರುವುದಾಗಿ ತಿಳಿಸಿದರು.

ಭಾರತದ ‘ನೆರೆಹೊರೆಯವರಿಗೆ ಮೊದಲ ಆದ್ಯತೆ’ (Neighbourhood First) ನೀತಿಯಡಿ, ತೈಲ ಪೂರೈಕೆಗೆ ಸಂಬಂಧಿಸಿದ ಗಂಭೀರ ಸವಾಲುಗಳ ನಡುವೆಯೂ ನೇಪಾಳಕ್ಕೆ ಇಂಧನ, ರಸಗೊಬ್ಬರ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯನ್ನು ನಿರಂತರವಾಗಿ ಮುಂದುವರಿಸಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.