ಉಡುಪಿ: ಕ್ರಿಸ್ಮಸ್ ಹಬ್ಬಕ್ಕೆ ಇನ್ನೂ ತಿಂಗಳಿಗೂ ಹೆಚ್ಚು ಸಮಯವಿದ್ದರೂ ಉಡುಪಿಯಲ್ಲಿ ಹಬ್ಬದ ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ. ಹಬ್ಬದ ಸಂಭ್ರಮಕ್ಕೆ ವಿಶೇಷ ಮೆರುಗು ನೀಡುವ ಕೇಕ್ ತಯಾರಿಯ ಭಾಗವಾಗಿ ಮಣಿಪಾಲದಲ್ಲಿ ಪಾಶ್ಚಾತ್ಯರ ವಿಶಿಷ್ಟ ಸಂಪ್ರದಾಯವಾದ ‘ಫ್ರೂಟ್ ಮಿಕ್ಸಿಂಗ್’ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಬಗೆಬಗೆಯ ಡ್ರೈಫ್ರೂಟ್ಸ್ಗಳನ್ನು ರಾಶಿ ಹಾಕಿ, ಅವುಗಳಿಗೆ ಲೀಟರ್ಗಟ್ಟಲೆ ಮದ್ಯ ಹಾಗೂ ಹಣ್ಣಿನ ರಸಗಳನ್ನು ಬೆರೆಸಿ ಸಿದ್ಧಪಡಿಸುವ ಈ ಪ್ರಕ್ರಿಯೆ ನೋಡುಗರ ಗಮನ ಸೆಳೆಯಿತು.
ಮಣಿಪಾಲದ ಪ್ರಸಿದ್ಧ ಕಂಟ್ರಿನ್ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವು ಬಗೆಯ ಒಣಹಣ್ಣುಗಳಿಗೆ ಸುಮಾರು 60 ಲೀಟರ್ ರಮ್, ವಿಸ್ಕಿ, ಬ್ಲ್ಯಾಕ್ ವೈನ್, ರೆಡ್ ವೈನ್ ಸೇರಿದಂತೆ ವಿವಿಧ ಪಾನೀಯಗಳು ಹಾಗೂ ಹಣ್ಣಿನ ರಸಗಳನ್ನು ಬೆರೆಸಲಾಯಿತು.
ನಂತರ ಈ ಮಿಶ್ರಣವನ್ನು ಚೆನ್ನಾಗಿ ಕಲಸಿ, ಹದಗೊಳಿಸಿ ಗಾಳಿಯಾಡದಂತೆ ಮುಚ್ಚಿ ಸಂಗ್ರಹಿಸಿಡಲಾಯಿತು. ಸುಮಾರು ಒಂದು ತಿಂಗಳ ಕಾಲ ಮದ್ಯ ಹಾಗೂ ಹಣ್ಣಿನ ರಸಗಳನ್ನು ಹೀರಿಕೊಂಡು ಹದಗೊಳ್ಳುವ ಈ ಮಿಶ್ರಣವನ್ನು ಬಳಸಿ ಕ್ರಿಸ್ಮಸ್ಗಾಗಿ ವಿಶೇಷ ಕೇಕ್ಗಳನ್ನು ತಯಾರಿಸಲಾಗುತ್ತದೆ.
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಬೆಳೆ ಕಟಾವಿನ ಋತುವಿನ ಬಳಿಕ ಈ ಸಂಪ್ರದಾಯವನ್ನು ಆಚರಿಸುವ ರೂಢಿಯಿದೆ. ಕ್ರಿಸ್ಮಸ್ ಹಬ್ಬಕ್ಕೆ ಬೇಕಾದ ಕೇಕ್ಗಳ ತಯಾರಿಗೆ ಮುಂಚಿತವಾಗಿ ಒಣಹಣ್ಣುಗಳನ್ನು ಮದ್ಯದಲ್ಲಿ ನೆನೆಸಿಡುವುದು ಇದರ ವಿಶೇಷತೆ. ಬ್ರಿಟಿಷರ ಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ ಎನ್ನಲಾಗುತ್ತದೆ.
ಮದ್ಯದಲ್ಲಿ ನೆನೆಸಿಟ್ಟ ಒಣಹಣ್ಣುಗಳಿಂದ ತಯಾರಿಸುವ ಕೇಕ್ ವಿಶಿಷ್ಟ ರುಚಿ, ಪರಿಮಳ ಹೊಂದಿರುತ್ತದೆ. ಹೀಗಾಗಿ ಕ್ರಿಸ್ಮಸ್ ಆಚರಣೆಯಲ್ಲಿ ಈ ಕೇಕ್ಗಳಿಗೆ ವಿಶೇಷ ಸ್ಥಾನವಿದೆ. ಮಣಿಪಾಲದಲ್ಲಿ ಕಳೆದ ಕೆಲವು ವರ್ಷಗಳಿಂದ ಫ್ರೂಟ್ ಮಿಕ್ಸಿಂಗ್ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.
ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಹೋಟೆಲ್ಗೆ ಆಗಮಿಸುವ ಅತಿಥಿಗಳಿಗೆ ಈ ವಿಶೇಷ ಕೇಕ್ಗಳನ್ನು ವಿತರಿಸುವ ಮೂಲಕ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲಾಗುತ್ತದೆ.
ಸಂಪ್ರದಾಯ, ಸೌಹಾರ್ದ ಹಾಗೂ ರುಚಿಯ ಸಮ್ಮಿಲನವಾಗಿರುವ ಫ್ರೂಟ್ ಮಿಕ್ಸಿಂಗ್ ಕಾರ್ಯಕ್ರಮ ಕ್ರಿಸ್ಮಸ್ ಆಗಮನದ ಮುನ್ಸೂಚನೆಯಾಗಿ ಗಮನ ಸೆಳೆಯುತ್ತಿದೆ.















