ಉಡುಪಿ: ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ತೆಂಗಿನ ಮರ ತೆರವು; ಸಾರ್ವಜನಿಕರಿಗೆ ನಿರಾಳ

ಉಡುಪಿ: ನಗರದ ಸಿಟಿ ಬಸ್ ನಿಲ್ದಾಣದಿಂದ ಸರ್ವಿಸ್ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿ ಅಪಾಯಕಾರಿಯಾಗಿ ವಾಲಿಕೊಂಡಿದ್ದ ಬೃಹತ್ ತೆಂಗಿನ ಮರವನ್ನು ನಗರಸಭೆ ತೆರವುಗೊಳಿಸಿದೆ. ಈ ಮೂಲಕ ಹಲವು ದಿನಗಳಿಂದ ಸಾರ್ವಜನಿಕರಲ್ಲಿ ಮನೆಮಾಡಿದ್ದ ಆತಂಕ ದೂರವಾಗಿದ್ದು, ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ರಸ್ತೆಯತ್ತ ವಾಲಿಕೊಂಡಿದ್ದ ತೆಂಗಿನ ಮರದಲ್ಲಿನ ಒಣಗಿದ ಗರಿಗಳು ಹಾಗೂ ತೆಂಗಿನಕಾಯಿಗಳು ಆಗಾಗ್ಗೆ ರಸ್ತೆಗೆ ಉದುರುತ್ತಿದ್ದವು. ಇದರಿಂದಾಗಿ ವಾಹನ ಸವಾರರು ಮತ್ತು ಪಾದಚಾರಿಗಳು ಅಪಾಯದ ಭೀತಿಯಲ್ಲೇ ಸಂಚರಿಸುವಂತಾಗಿತ್ತು.
ಈ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುವುದಲ್ಲದೆ, ಪಾದಚಾರಿಗಳ ಓಡಾಟವೂ ಹೆಚ್ಚಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಸೇರಿದಂತೆ ಅನೇಕರು ಇದೇ ಮಾರ್ಗವನ್ನು ಅವಲಂಬಿಸಿದ್ದಾರೆ.

ಗಾಳಿಯ ವೇಗಕ್ಕೆ ಒಣಗಿದ ಗರಿಗಳು ಅಥವಾ ತೆಂಗಿನಕಾಯಿಗಳು ರಸ್ತೆಗೆ ಉದುರಿದರೆ ಪಾದಚಾರಿಗಳಿಗೆ ಗಾಯವಾಗುವ ಹಾಗೂ ವಾಹನ ಸವಾರರು ಅಪಘಾತಕ್ಕೀಡಾಗುವ ಸಾಧ್ಯತೆ ಇತ್ತು.
ಈ ಅಪಾಯವನ್ನು ಮನಗಂಡ ಸಮಾಜಸೇವಕ ನಿತ್ಯಾನಂದ ಒಳಕಾಡು ಸೇರಿದಂತೆ ಸಾರ್ವಜನಿಕರು ತೆಂಗಿನ ಮರವನ್ನು ತೆರವುಗೊಳಿಸುವಂತೆ ನಗರಸಭೆಯನ್ನು ಆಗ್ರಹಿಸಿದ್ದರು.

ಸಾರ್ವಜನಿಕರ ಒತ್ತಾಯಕ್ಕೆ ಸ್ಪಂದಿಸಿದ ನಗರಸಭೆ ಇದೀಗ ಅಪಾಯಕಾರಿ ಮರವನ್ನು ತೆರವುಗೊಳಿಸಿದ್ದು, ಸಂಭಾವ್ಯ ಅನಾಹುತವೊಂದು ತಪ್ಪಿದಂತಾಗಿದೆ.