ಕುಂದಾಪುರ : ಇಲ್ಲಿಗೆ ಸಮೀಪದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬುಧವಾರ ಸಂಜೆ ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಶಾರದ ಅರವಿಂದ ಬೊಬ್ಡೆ ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆದು ಅರ್ಚಕರ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.
ಸಂಜೆ ಸುಮಾರು 7.15 ಗಂಟೆ ದೇವಸ್ಥಾನಕ್ಕೆ ಬಂದಿದ್ದ ಅವರನ್ನು ಶ್ರೀ ಕ್ಷೇತ್ರದ ಅರ್ಚಕರಾದ ಡಾ.ಎನ್.ನರಸಿಂಹ ಅಡಿಗ, ಶ್ರೀಧರ ಅಡಿಗ, ಎನ್.ಗೋವಿಂದ ಅಡಿಗ ಹಾಗೂ ನಿತ್ಯಾನಂದ ಅಡಿಗರ ನೇತ್ರತ್ವದಲ್ಲಿ ಪೂರ್ಣ ಕುಂಭ ಸ್ವಾಗತವನ್ನು ನೀಡಿ ಬರಮಾಡಿಕೊಳ್ಳಲಾಯಿತು. ವಿಶೇಷ ಕರ್ತವ್ಯಧಿಕಾರಿ ಬಿ.ಹರಿ, ಉಚ್ಚ ನ್ಯಾಯಾಲಯದ ರಿಜಿಸ್ತಾರ್ ರಾಜೇಂದ್ರ ಬಾದಾಮಿಕರ್, ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ.ಎಂ.ಜೋಷಿ, ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ನರಹರಿ ಪಿ ಮರಾಠೆ, ಹಿರಿಯ ಸಿವಿಲ್ ನ್ಯಾಯಾಧೀಶ ರಂಗೇ ಗೌಡರು, 2ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಧೀಶ ಧನೀಶ್ ಮುಗಳೆ, ಕುಂದಾಪುರದ ಪೊಲೀಸ್ ಉಪವಿಭಾಗದ ಸಹಾಯಕ ಅಧೀಕ್ಷಕ ಹರಿರಾಂ ಶಂಕರ ಇದ್ದರು.
ಕ್ಷೇತ್ರದ ಆರಾಧ್ಯ ದೇವತೆ ಶ್ರೀ ಮೂಕಾಂಬಿಕೆ ಹಾಗೂ ವೀರಭದ್ರ ಸ್ವಾಮಿಯ ದರ್ಶನ ಪಡೆದುಕೊಂಡ ಅವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್‌ಕುಮಾರ ಎಂ ಶೆಟ್ಟಿ ಗೌರವಿಸಿದರು. ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ.ವಿ.ಶ್ರೀಧರ ಅಡಿಗ, ರಮೇಶ್ ಗಾಣಿಗ, ನರಸಿಂಹ ಹಳಗೇರಿ ಇದ್ದರು.
ಮುಖ್ಯ ನ್ಯಾಯಮೂರ್ತಿಗಳಿಗೆ ಝಡ್ ಶ್ರೇಣಿಯ ಭದ್ರತಾ ವ್ಯವಸ್ಥೆ ಇದ್ದುದರಿಂದಾಗಿ ಉಡುಪಿಯಿಂದ ಕೊಲ್ಲೂರಿಗೆ ಪ್ರಯಾಣಿಸುವ ಹಾಗೂ ದೇವಸ್ಥಾನದ ಪರಿಸರದಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.