ಉಡುಪಿ: ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ. ಮಕ್ಕಳ ಮೇಲಾಗುವ ಶೋಷಣೆ ಹಾಗೂ ದೌರ್ಜನ್ಯಗಳನ್ನು ತಡೆಯಲು ಜಾರಿಗೊಳಿಸಲಾದ ಮಕ್ಕಳ ರಕ್ಷಣಾ ನೀತಿ-ನಿಯಮಗಳನ್ನು ಅನುಷ್ಠಾನಗೊಳಿಸಲು ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಕರೆ ನೀಡಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ ಇವರುಗಳ ಸಹಯೋಗದಲ್ಲಿ, ಮಕ್ಕಳ ರಕ್ಷಣೆಯ ಕುರಿತು ಹಾಗೂ ಮಕ್ಕಳ ರಕ್ಷಣಾ ನೀತಿ -2016 ರ ಕುರಿತು ಜಿಲ್ಲೆಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಆಯೋಜಿಸಲಾದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುತ್ತಿದ್ದ ನಾವುಗಳು ಪ್ರಸ್ತುತ ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಎಂಬುದನ್ನು ಅರಿತುಕೊಳ್ಳಬೇಕು. ಮಕ್ಕಳ ರಕ್ಷಣೆಗಾಗಿ ಜಾರಿಗೊಳಿಸಲಾದ ಹಕ್ಕುಗಳ ಬಗ್ಗೆ ಮಕ್ಕಳಿಗೆ ಅರಿವೇ ಇರುವುದಿಲ್ಲ. ದುರ್ಬಲರು, ಅಶಕ್ತರಾದ ಮಕ್ಕಳಿಗೆ ಸಾಂವಿಧಾನಿಕವಾಗಿ ನೀಡಲಾದ ಹಕ್ಕುಗಳ ಬಗ್ಗೆ ತಿಳಿಸುವುದು ಹಾಗೂ ಅವುಗಳ ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದ್ದು, ಇದು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕಿದೆ ಎಂದರು.
ಮಕ್ಕಳು ಸೂಕ್ಷ್ಮ ಸ್ವಭಾವದವರಾಗಿದ್ದು, ಅವರ ವಿಷಯದಲ್ಲಿ ಸಂವೇದನಾಶೀಲವಾಗಿ ವರ್ತಿಸಬೇಕು. ಮಕ್ಕಳ ರಕ್ಷಣೆಗಾಗಿ ಕಾಯಿದೆ, ಕಾನೂನುಗಳು ಇದ್ದರೂ ಸಹ ಬಾಲ್ಯ ವಿವಾಹ, ಶಾಲೆಯಿಂದ ಹೊರಗುಳಿದವರು, ದುಶ್ಚಟಗಳಿಗೆ ಬಲಿಯಾದ ಮಕ್ಕಳು ಸೇರಿದಂತೆ ಮತ್ತಿತರ ಪ್ರಕರಣಗಳು ನಮ್ಮ ಕಣ್ಣ ಮುಂದೆ ಇವೆ. ಇವುಗಳಿಗೆ ಕಡಿವಾಣ ಹಾಕಿ, ಮಕ್ಕಳು ಶಿಕ್ಷಣವಂತರಾಗಿ ಉತ್ತಮ ಬದುಕು ಕಟ್ಟಿಕೊಳ್ಳಲು ನಾಗರಿಕರು ಸಕ್ರೀಯವಾಗಿ ಕೆಲಸ ಮಾಡಬೇಕಿದೆ ಎಂದರು.
17 ರಿಂದ 18 ವರ್ಷ ಹದಿಹರೆಯದ ಸೂಕ್ಷö್ಮವಾದ ವಯಸ್ಸು. ದೈಹಿಕ, ಮಾನಸಿಕ ಬದಲಾವಣೆಗಳಿಂದ ಈ ವಯೋಮಾನದವರಲ್ಲಿ ಗೊಂದಲಗಳು ಇರುತ್ತವೆ. ಸ್ಪಷ್ಟತೆ ಇರುವುದಿಲ್ಲ. ಜೀವನದಲ್ಲಿ ಸಾಕಷ್ಟು ಗುರಿ ಇಟ್ಟುಕೊಂಡರೂ ಸಹ ಆ ಗುರಿ ಸಾಧನೆಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಹದಿಹರೆಯದ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಪೋಷಕರೊಂದಿಗೆ ಕಾಲೇಜುಗಳಲ್ಲಿನ ಅಧ್ಯಾಪಕರುಗಳು ಪ್ರಮುಖ ಪಾತ್ರ ವಹಿಸಲಿದ್ದು, ಮಕ್ಕಳ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಈ ತರಬೇತಿಯು ಅತ್ಯಂತ ಮಹತ್ವದ್ದಾಗಿದೆ ಎಂದರು.
ದೈನಂದಿನ ಜೀವನದಲ್ಲಿ ಮಕ್ಕಳು ಭಿಕ್ಷೆ ಬೇಡುವುದು, ಚಿಂದಿ ಆಯುವುದು, ಪೋಷಕರಿಂದಲೇ ದೌರ್ಜನ್ಯಕ್ಕೊಳಗಾಗುವುದು, ಶಾಲೆಯಿಂದ ದೂರ ಉಳಿದಿರುವುದು ಸೇರಿದಂತೆ ಮತ್ತಿತರ ಮಕ್ಕಳ ಮೇಲಿನ ಪ್ರಕರಣಗಳು ಕಂಡುಬಂದಲ್ಲಿ ಅಥವಾ ಅಹಿತಕರ ಘಟನೆ ನಡೆದಾಗ ಕಾನೂನುಬದ್ಧವಾಗಿ ಮತ್ತು ಸೂಕ್ಷ್ಮವಾಗಿ ತಕ್ಷಣ ಸ್ಪಂದಿಸುವ ಮಕ್ಕಳ ಸಹಾಯವಾಣಿ ಸಂಖ್ಯೆ: 1098 ಗೆ ಮಾಹಿತಿ ನೀಡಿದ್ದಲ್ಲಿ, ಅವರುಗಳು ದೌರ್ಜನ್ಯ ತಡೆಗಟ್ಟುವ ಕೆಲಸ ಮಾಡಲಿದ್ದಾರೆ ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸತೀಶ್ ಬಿ ನಾಯಕ್ ಮಾತನಾಡಿ, ಪೋಷಕರೊಂದಿಗೆ ಹೇಳಿಕೊಳ್ಳಲಾಗದ ಎಷ್ಟೊ ವಿಷಯಗಳನ್ನು ವಿದ್ಯಾರ್ಥಿಗಳು ಅಧ್ಯಾಪಕರುಗಳ ಬಳಿ ಹಂಚಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆ ಮಾಡುವ ಹಕ್ಕುಗಳ ಮಾಹಿತಿ ಅರಿತಿರಬೇಕಾಗಿರುತ್ತದೆ. ತರಬೇತಿಗೆ ಆಗಮಿಸಿರುವ ಪ್ರಾಂಶುಪಾಲರುಗಳು ಇದರ ಸಂಪೂರ್ಣ ಮಾಹಿತಿ ಪಡೆದುಕೊಂಡು ತಮ್ಮ ಉಪನ್ಯಾಸಕರುಗಳಿಗೆ ಯಾವ ರೀತಿಯಲ್ಲಿ ಮಕ್ಕಳ ರಕ್ಷಣೆಗೆ ಮುಂದಗಾಬೇಕು ಎಂಬುದನ್ನು ತಿಳಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರೇಮಮೂರ್ತಿ ಕೆ ಮಾತನಾಡಿ, ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಕ್ಕಳ ರಕ್ಷಣೆ ಕೇವಲ ಪೋಷಕರ ಕರ್ತವ್ಯವಲ್ಲ. ಅದು ಸಮಾಜದ ಜವಾಬ್ದಾರಿ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಬೇಕು.
18 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ತಮ್ಮ ಹಕ್ಕುಗಳನ್ನು ಮುಕ್ತವಾಗಿ ಅನುಭವಿಸಲು ಅನುವು ಮಾಡಿಕೊಡಬೇಕು ಎಂದ ಅವರು, ಕುಟುಂಬ, ಸಮಾಜ ಹಾಗೂ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಮತ್ತಿತರ ಒಂದಲ್ಲಾ ಒಂದು ಕಡೆಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಅವುಗಳ ನಿಯಂತ್ರಣಕ್ಕೆ ಕಡಿವಾಣ ಹಾಕಲು ಈ ಕಾರ್ಯಾಗಾರವು ಪ್ರಯೋಜನಕಾರಿಯಾಗಲಿದ್ದು, ಅನುಷ್ಠಾನದಲ್ಲಿ ಯಾವುದೇ ಗೊಂದಲಗಳಿದ್ದಲ್ಲಿ ಬಗೆಹರಿಸಿಕೊಳ್ಳುವಂತೆ ತಿಳಿಸಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟ ಪೂರ್ವ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, “ಹದಿಹರೆಯದ ಕಾವಲುಗಾರ” ಎಂಬ ವಿಷಯದ ಮೇಲೆ ಮಕ್ಕಳ ಹಕ್ಕುಗಳ ಮತ್ತು ಪ್ರಾಂಶುಪಾಲರ ಪಾತ್ರ ಕುರಿತು ಮಾಹಿತಿ ನೀಡಿ ಮಾತನಾಡುತ್ತಾ, ಮಕ್ಕಳ ರಕ್ಷಣೆಗೆ ಸಂಬಂಧಂತೆ ಪ್ರಸ್ತುತ ಹದಿಹರೆಯದವರ ಪ್ರಕರಣಗಳೇ ಹೆಚ್ಚು ಕಂಡುಬರುತ್ತಿದ್ದು, ಅದರಲ್ಲೂ 18 ವರ್ಷದೊಳಗಿನ ಹೆಣ್ಣು ಮಕ್ಕಳು ಗರ್ಭಿಣಿಯರಾಗುವ ಪ್ರಕರಣಗಳು ಸೇರಿದಂತೆ ಮತ್ತಿತರ ಪ್ರಕರಣಗಳನ್ನು ತಡೆಗಟ್ಟಿ ಅವರುಗಳಿಗೆ ಸುರಕ್ಷಿತ ವಾತಾವರಣದಲ್ಲಿರುವಂತೆ ನೋಡಿಕೊಳ್ಳಬೇಕು ಎಂದ ಅವರು, ಸರಕಾರ ಮಕ್ಕಳ ರಕ್ಷಣೆಗೆ ಜಾರಿಗೆ ತಂದಿರುವ ನಿಯಮಗಳನ್ನು, ಸಮರ್ಪಕವಾಗಿ ಅನುಷ್ಠಾನಗೊಳಿಸುವುದರೊಂದಿಗೆ ಮಕ್ಕಳ ವಿಕಸನಕ್ಕೆ ಸಹಕರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ದತ್ತು ಮಾಸಾಚರಣೆ ಕುರಿತ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿ, ದತ್ತು ಮಾಸಾಚರಣೆಯ ಘೋಷ ವಾಕ್ಯದ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಹಾಗೂ ಮತ್ತಿತರರು ಭಾಗವಹಿಸಿದ್ದರು.















