ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವಾಗಿದ್ದ ಹೋಂಡಾ ಶೈನ್ ಬೈಕ್ನ್ನು ಪತ್ತೆಹಚ್ಚಿದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಆರ್ಎಸ್ಬಿ ಸಭಾಭವನದ ಸಮೀಪದ ವೇಘಾ ಟ್ರಾನ್ಸ್ಪೋರ್ಟ್ಸ್ ಬಳಿ ಇರುವ ಶೆಡ್ನಲ್ಲಿ KA 20 EU 3431 ನೋಂದಣಿ ಸಂಖ್ಯೆಯ ಹೋಂಡಾ ಶೈನ್ ಬೈಕ್ನ್ನು ಅ.20ರಂದು ಬೆಳಿಗ್ಗೆ 9.30ಕ್ಕೆ ನಿಲ್ಲಿಸಿ ಅದರ ಮಾಲೀಕರು ಹುಬ್ಬಳ್ಳಿಗೆ ತೆರಳಿದ್ದರು.
ಅ.22ರಂದು ರಾತ್ರಿ 9 ಗಂಟೆಗೆ ವಾಪಸಾಗಿ ನೋಡಿದಾಗ ಬೈಕ್ ಕಾಣೆಯಾಗಿತ್ತು. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು.
ನ.18ರಂದು ಮಣಿಪಾಲ ಠಾಣೆಯ ಎಎಸ್ಐ ವಿವೇಕಾನಂದ, ಹೆಡ್ಕಾನ್ಸ್ಟೆಬಲ್ ಮಹಮ್ಮದ್ ಅಜ್ಮಲ್ ಮತ್ತು ಪೊಲೀಸ್ ಕಾನ್ಸ್ಟೆಬಲ್ ಮಂಜುನಾಥ ಎಂ.ಆರ್. ಅವರು ಶಿವಳ್ಳಿ ಗ್ರಾಮದ ಮಣ್ಣಪಳ್ಳ ಕೆರೆ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಬೈಕ್ನಲ್ಲಿ ಬಂದ ವ್ಯಕ್ತಿಯನ್ನು ತಡೆದು ವಿಚಾರಣೆ ನಡೆಸಿದರು.
ಆತನನ್ನು ಬೆಂಗಳೂರಿನ ಮಾರೆನಹಳ್ಳಿ ನಿವಾಸಿ ಮನೀಶ್ ಎ. ಎಂದು ಗುರುತಿಸಲಾಗಿದೆ. ಪರಿಶೀಲನೆ ವೇಳೆ ಆತ ಚಲಾಯಿಸುತ್ತಿದ್ದ ಬೈಕ್ ಕಳವಾಗಿದ್ದ ಹೋಂಡಾ ಶೈನ್ ಎಂಬುದು ದೃಢಪಟ್ಟಿದ್ದು, ಕಳವು ಮಾಡಿರುವುದಾಗಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಯು. ಬೆಳ್ಳಿಯಪ್ಪ ಅವರ ನಿರ್ದೇಶನದಂತೆ, ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ಮತ್ತು ಪಿಎಸ್ಐ ಶಂಭುಲಿಂಗಯ್ಯ ಎಂ. ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.
ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ಎಎಸ್ಐ ವಿವೇಕಾನಂದ, ಹೆಡ್ಕಾನ್ಸ್ಟೆಬಲ್ ಮಹಮ್ಮದ್ ಅಜ್ಮಲ್ ಹಾಗೂ ಕಾನ್ಸ್ಟೆಬಲ್ ಮಂಜುನಾಥ ಎಂ.ಆರ್. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.















