ಗ್ರಾಹಕರಿಗೆ ಅಡುಗೆ ಎಣ್ಣೆಯ ಹೆಸರಿನಲ್ಲಿ ದಾರಿತಪ್ಪಿಸಿದ “ಬೋಳಾಸ್” ಮಂಗಳೂರಿನ ಬೋಳಾಸ್ ಆಗ್ರೋ ಸಂಸ್ಥೆಯಿಂದ 1,240 ಕೆ.ಜಿ. ಅಡುಗೆ ಎಣ್ಣೆ ವಶಪಡಿಸಿದ ಅಧಿಕಾರಿಗಳು!

ಮಂಗಳೂರು: ಗ್ರಾಹಕರನ್ನು ದಾರಿತಪ್ಪಿಸುವ ರೀತಿಯಲ್ಲಿ ಮಿಸ್ಬ್ರ್ಯಾಂಡಿಂಗ್ ಹಾಗೂ ಲೇಬಲಿಂಗ್ ಲೋಪದೋಷಗಳನ್ನು ಎಸಗಿದ ಆರೋಪದ ಮೇಲೆ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಬೋಳಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, 1,240 ಕೆ.ಜಿ.ಗೂ ಅಧಿಕ ಅಡುಗೆ ಎಣ್ಣೆಯನ್ನು ವಶಪಡಿಸಿಕೊಂಡಿದ್ದಾರೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ನಡೆಸಿದ ಅನಿರೀಕ್ಷಿತ ತಪಾಸಣೆ ವೇಳೆ ಈ ಅಕ್ರಮ ಬೆಳಕಿಗೆ ಬಂದಿದೆ. ತಪಾಸಣೆ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಗಂಭೀರ ಸ್ವರೂಪದ ಲೇಬಲಿಂಗ್ ಮತ್ತು ಬ್ರ್ಯಾಂಡಿಂಗ್ ಲೋಪದೋಷಗಳು ಪತ್ತೆಯಾಗಿವೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಖರೀದಿಸಿದ ಕಚ್ಚಾ ಶೇಂಗಾ ಎಣ್ಣೆಯನ್ನು ಬೈಕಂಪಾಡಿ ಘಟಕಕ್ಕೆ ತಂದು ಮರುಪ್ಯಾಕಿಂಗ್ ಮಾಡಲಾಗುತ್ತಿತ್ತು. ಬಳಿಕ ಅದಕ್ಕೆ ‘ಕೋಲ್ಡ್ ಪ್ರೆಸ್ಡ್’ (ಗಾಣದ ಎಣ್ಣೆ) ಎಂಬ ಲೇಬಲ್ ಅಂಟಿಸಿ ಮಾರುಕಟ್ಟೆಗೆ ಪೂರೈಸಲಾಗುತ್ತಿತ್ತು ಎಂದು ಅಧಿಕಾರಿಗಳ ತಪಾಸಣೆಯಲ್ಲಿ ತಿಳಿದುಬಂದಿದೆ. ಈ ಮೂಲಕ ಉತ್ಪನ್ನದ ನೈಜ ಗುಣಮಟ್ಟದ ಬಗ್ಗೆ ಗ್ರಾಹಕರಿಗೆ ತಪ್ಪು ಮಾಹಿತಿ ನೀಡಲಾಗುತ್ತಿತ್ತು ಎಂದು ಇಲಾಖೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಶೇಂಗಾ ಎಣ್ಣೆಯ 11 ಪೆಟ್ಟಿಗೆಗಳು (ಪ್ರತಿ ಪೆಟ್ಟಿಗೆಗೆ 10 ಕೆ.ಜಿ.) ಹಾಗೂ 30 ಕ್ಯಾನ್‌ಗಳು (ಪ್ರತಿ ಕ್ಯಾನ್‌ಗೆ 35 ಲೀಟರ್) ಮತ್ತು ಕೊಬ್ಬರಿ ಎಣ್ಣೆಯ 4 ಪೆಟ್ಟಿಗೆಗಳನ್ನು (ಪ್ರತಿ ಪೆಟ್ಟಿಗೆಗೆ 20 ಕೆ.ಜಿ.) ವಶಪಡಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ ಲಕ್ಷಾಂತರ ರೂಪಾಯಿ ಮೌಲ್ಯದ 1,240 ಕೆ.ಜಿ.ಗೂ ಅಧಿಕ ಅಡುಗೆ ಎಣ್ಣೆಯನ್ನು ಜಪ್ತಿ ಮಾಡಲಾಗಿದೆ. ಗ್ರಾಹಕರನ್ನು ತಪ್ಪುದಾರಿಗೆ ಎಳೆಯುವ ರೀತಿಯಲ್ಲಿ ಉತ್ಪನ್ನಗಳ ಲೇಬಲಿಂಗ್ ಮತ್ತು ಬ್ರ್ಯಾಂಡಿಂಗ್ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಸಂಸ್ಥೆಯ ವಿರುದ್ಧ ನಿಯಮಾನುಸಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.