ಉಡುಪಿ: ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಮಂಗಳೂರು ವತಿಯಿಂದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಬೋಟ್ ಮಾಲಕರಿಗೆ ಪ್ರೋತ್ಸಾಹಕ ಉಡುಗೊರೆ ವಿತರಣಾ ಸಮಾರಂಭ ಡಿಸೆಂಬರ್ ೨೮ ಶನಿವಾರ ಮಧ್ಯಾಹ್ನ ೩ ಗಂಟೆಗೆ ಮಲ್ಪೆ ಏಳೂರು ಮೊಗವೀರ ಸಭಾಭವನದಲ್ಲಿ ನಡೆಯಲಿದೆ.
ಸಮಾರಂಭದ ಉದ್ಘಾಟನೆಯನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕರಾದ ನಾಡೋಜ ಡಾ| ಜಿ. ಶಂಕರ್ ನೆರವೇರಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಯಶ್‌ಪಾಲ್ ಸುವರ್ಣ ವಹಿಸಲಿದ್ದಾರೆ.
ಮೀನುಗಾರಿಕೆ ವಿಷಯದಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಯ ದತ್ತು ಸ್ವೀಕಾರವನ್ನು ಮೀನುಗಾರಿಕೆ ಬಂದರು ಮತ್ತು ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಯವರು ಹಾಗೂ ವಿದ್ಯಾರ್ಥಿ ವೇತನ ವಿತರಣೆಯನ್ನು ಉಡುಪಿ ಶಾಸಕರಾದ ಕೆ. ರಘುಪತಿ ಭಟ್ ನೆರವೇರಿಸಲಿದ್ದು, ಪ್ರೋತ್ಸಾಹಕ ಉಡುಗೊರೆಗಳನ್ನು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಶ್ಯಾಮಲ ಎಸ್. ಕುಂದರ್ ಹಾಗೂ ಉದ್ಯಮಿ ಆನಂದ ಸಿ. ಕುಂದರ್ ವಿತರಿಸಲಿದ್ದಾರೆ.
ಸಮಾರಂಭದಲ್ಲಿ ಮಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷರಾದ ಮಂಜುನಾಥ ಎಸ್. ಕೆ., ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ಕೃಷ್ಣ ಸುವರ್ಣ, ಮಲ್ಪೆ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಶ್ರೀಸಾಧು
ಸಾಲ್ಯಾನ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಶ್ರೀ ಜಯ ಸಿ. ಕೋಟ್ಯಾನ್, ಉದ್ಯಮಿ ಶ್ರೀ ಆನಂದ ಪಿ. ಸುವರ್ಣ, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ ವಿನಯ ಕರ್ಕೇರ, ತಾಲೂಕು ಪಂಚಾಯತ್ ಸದಸ್ಯರಾದ ಶರತ್ ಕೋಟ್ಯಾನ್, ನಗರ ಸಭಾ ಸದಸ್ಯರುಗಳಾದ ಸುಂದರ ಜೆ. ಕಲ್ಮಾಡಿ, ಲಕ್ಷ್ಮೀ ಮಂಜುನಾಥ ಸಾಲ್ಯಾನ್, ಎಡ್ಲಿನ್ ಕರ್ಕಡ ಭಾಗವಹಿಸಲಿರುವುದಾಗಿ ಫೆಡರೇಷನ್ ಅಧ್ಯಕ್ಷರಾದ ಯಶ್‌ಪಾಲ್ ಸುವರ್ಣ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮೀನುಗಾರಿಕೆ ವಿಷಯದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಫೆಡರೇಷನ್ ವತಿಯಿಂದ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಲು ನಿರ್ಧರಿಸಿದ್ದು, ವಿದ್ಯಾರ್ಥಿಯ ವ್ಯಾಸಾಂಗದ ಸಂಪೂರ್ಣ ವೆಚ್ಚವನ್ನು
ಫೆಡರೇಷನ್ ಮೂಲಕ ಭರಿಸಲಾಗುವುದು.