ಉಡುಪಿ: ತುಳುನಾಡಿನ ಮಣ್ಣಿನ ಸೊಗಡು, ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿರುವ ಕಂಬಳ ಕ್ರೀಡೆ ಇಂದು ಕರಾವಳಿಯ ಗಡಿ ದಾಟಿ ರಾಜ್ಯದ ವಿವಿಧೆಡೆ ಜನಪ್ರಿಯತೆ ಗಳಿಸಿದೆ. ಈ ಕ್ರೀಡೆಯ ಬೆಳವಣಿಗೆಯ ಜತೆಗೆ ತಮ್ಮ ಬದುಕನ್ನೂ ಬೆಸೆದುಕೊಂಡು, ಐದು ದಶಕಗಳಿಗೂ ಅಧಿಕ ಕಾಲ ಕಂಬಳದ ಪರಂಪರೆಯನ್ನು ಮುನ್ನಡೆಸಿಕೊಂಡು ಬರುತ್ತಿರುವವರು ಕೊಳಕೆ ಇರ್ವತ್ತೂರು ಭಾಸ್ಕರ್ ಸುಬ್ಬಯ್ಯ ಕೋಟ್ಯಾನ್.
ಕಂಬಳವೆಂದರೆ ಇವರಿಗೆ ಕೇವಲ ಸ್ಪರ್ಧೆಯಲ್ಲ, ಪದಕಗಳಿಗಾಗಿ ನಡೆಯುವ ಹೋರಾಟವೂ ಅಲ್ಲ. ಅದು ತಂದೆಯಿಂದ ಬಂದ ಸಂಪ್ರದಾಯ, ಕುಟುಂಬದ ಹೆಮ್ಮೆ ಮತ್ತು ಬದುಕಿನ ಅವಿಭಾಜ್ಯ ಅಂಗ. ತಂದೆಯ ಕಾಲದಿಂದ ಆರಂಭವಾದ ಕಂಬಳದ ಕೋಣಗಳನ್ನು ಕಟ್ಟುವ ಪರಂಪರೆಯನ್ನು ಇಂದಿಗೂ ಅದೇ ಶ್ರದ್ಧೆ ಮತ್ತು ಪ್ರೀತಿಯಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಕಂಬಳ ಲೋಕದಲ್ಲಿ ತಮ್ಮದೇ ಆದ ಕೋಣಗಳ ಜೋಡಿ ಹಾಗೂ ಅತ್ಯುತ್ತಮ ಪ್ರದರ್ಶನಗಳ ಮೂಲಕ ಗುರುತಿಸಿಕೊಂಡಿರುವ ಭಾಸ್ಕರ್ ಸುಬ್ಬಯ್ಯ ಕೋಟ್ಯಾನ್ ಅವರ ತಂಡ ಹಗ್ಗ ಹಿರಿಯ, ಹಗ್ಗ ಕಿರಿಯ ಹಾಗೂ ನೇಗಿಲು ವಿಭಾಗಗಳಲ್ಲಿ ಸ್ಪರ್ಧಿಸಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಇದುವರೆಗೆ 400ಕ್ಕೂ ಅಧಿಕ ಪ್ರಶಸ್ತಿಗಳನ್ನು ಗೆದ್ದಿರುವುದು ಇವರ ಕಂಬಳ ಪಯಣದ ಸಾಧನೆಗೆ ಸಾಕ್ಷಿ. ಅದರಲ್ಲೂ ನೇಗಿಲು ವಿಭಾಗದಲ್ಲಿ ಸತತ 12 ವರ್ಷ ಪ್ರಶಸ್ತಿ ಗಳಿಸಿರುವುದು ವಿಶೇಷ ಸಾಧನೆಯಾಗಿದೆ.
ತಂದೆಯಿಂದ ಬಂದ ಪರಂಪರೆ:
ತಂದೆಯ ಕಾಲದಿಂದಲೂ ಕಂಬಳದ ಕೋಣಗಳನ್ನು ಕಟ್ಟಿಕೊಂಡು ಬರುತ್ತಿದ್ದೇವೆ. ನಾನು ಕೂಡ ಅದೇ ಪರಂಪರೆಯನ್ನು ಮುಂದುವರಿಸಿದ್ದೇನೆ. ಮುಂದೆ ನನ್ನ ಮಗನೂ ಈ ಸಂಪ್ರದಾಯವನ್ನು ಮುನ್ನಡೆಸಿಕೊಂಡು ಹೋಗುತ್ತಾನೆ ಎಂಬ ವಿಶ್ವಾಸವಿದೆ. ನಾಲ್ವರು ಸಹೋದರರು ಹಾಗೂ ಮಗನ ಸಹಕಾರದಿಂದ ಕಂಬಳದ ತಂಡವನ್ನು ಮುನ್ನಡೆಸುತ್ತಿದ್ದೇವೆ. ಕೊಳಕೆಯಲ್ಲಿ ಎರಡು ವರ್ಷ ಕಂಬಳ ಆಯೋಜಿಸಿದ್ದೇವೆ ಎಂದು ಭಾಸ್ಕರ್ ಸುಬ್ಬಯ್ಯ ಕೋಟ್ಯಾನ್ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.
ಕಂಬಳದ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿರುವ ಇವರಿಗೆ ಕನೆಹಲಗೆ ವಿಭಾಗದಲ್ಲಿಯೂ ಕೋಣಗಳನ್ನು ಕಟ್ಟಿ ಸ್ಪರ್ಧಿಸಬೇಕೆಂಬ ಆಸೆಯಿದೆ. ಆದರೆ ಈವರೆಗೆ ಆ ಅವಕಾಶ ಸಾಧ್ಯವಾಗಿಲ್ಲ. ಹಗ್ಗ ಹಿರಿಯ, ಹಗ್ಗ ಕಿರಿಯ ಹಾಗೂ ನೇಗಿಲು ವಿಭಾಗಗಳಲ್ಲಿ ತಮ್ಮ ಕೋಣಗಳ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಪ್ರಸ್ತುತ ಬಂಟ್ವಾಳ ತಾಲೂಕಿನಿಂದ ತಂದಿರುವ ಎರಡು ಕೋಣಗಳನ್ನು ಸಾಕುತ್ತಿದ್ದಾರೆ. ‘ರಾಜಾ’ ಮತ್ತು ‘ಶಬರಿಸ್’ ಎಂಬ ಹೆಸರಿನ ಈ ಕೋಣಗಳು ಕಂಬಳದ ಅಂಗಳದಲ್ಲಿ ಇವರ ತಂಡದ ಪ್ರಮುಖ ಆಕರ್ಷಣೆಗಳಾಗಿವೆ.
ಕರಾವಳಿಯಿಂದ ಬೆಂಗಳೂರು, ಮೈಸೂರಿನವರೆಗೆ ಸಾಧನೆಒಂದು ಕಾಲದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸೀಮಿತವಾಗಿದ್ದ ಕಂಬಳ ಇಂದು ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ವಿಸ್ತರಿಸಿದೆ. ಕಂಬಳದ ಈ ಬೆಳವಣಿಗೆಯ ಜತೆಗೆ ಭಾಸ್ಕರ್ ಸುಬ್ಬಯ್ಯ ಕೋಟ್ಯಾನ್ ಅವರ ತಂಡವೂ ಹೊಸ ಸವಾಲುಗಳನ್ನು ಎದುರಿಸುತ್ತಿದೆ.
ಪುತ್ತೂರು, ಮಂಗಳೂರು (ಕುಡ್ಲ), ಮೈಸೂರು ದಸರಾ ಕಂಬಳ ಸೇರಿದಂತೆ ವಿವಿಧ ಜೋಡುಕರೆ ಕಂಬಳಗಳಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿದೆ. ಬೆಂಗಳೂರಿನಲ್ಲಿ ನಡೆದ ಕಂಬಳದಲ್ಲಿ ಪ್ರಥಮ ಸ್ಥಾನ ಗಳಿಸಿ ಪದಕ ಗೆದ್ದಿರುವುದು ಹಾಗೂ ಮೈಸೂರಿನಲ್ಲಿಯೂ ಪ್ರಥಮ ಸ್ಥಾನ ಪಡೆದಿರುವುದು ತಂಡದ ಸಾಧನೆಗಳಲ್ಲಿ ಪ್ರಮುಖವಾದವು.
ಕಂಬಳ ಇಂದು ಜನಪ್ರಿಯತೆಯ ಉತ್ತುಂಗಕ್ಕೇರಿದೆ. ಹಿಂದೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಷ್ಟೇ ನಡೆಯುತ್ತಿದ್ದ ಈ ಕ್ರೀಡೆ ಈಗ ರಾಜ್ಯದ ವಿವಿಧ ಭಾಗಗಳಿಗೆ ತಲುಪಿದೆ. ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಬಳ ವೀಕ್ಷಣೆಗೆ ಬರುತ್ತಿರುವುದು ಸಂತಸದ ಸಂಗತಿ ಎನ್ನುತ್ತಾರೆ ಅವರು.
ಪದಕಕ್ಕಿಂತ ಪರಂಪರೆಯೇ ಮುಖ್ಯ:
ಕಂಬಳದಲ್ಲಿ ಭಾಗವಹಿಸುವುದರ ಹಿಂದೆ ನಮ್ಮ ಉದ್ದೇಶ ಪ್ರಶಸ್ತಿ ಅಥವಾ ಪದಕ ಗಳಿಸುವುದಲ್ಲ. ಇದು ನಮ್ಮ ಕುಟುಂಬದ ಸಂಪ್ರದಾಯ. ಐದು ದಶಕಗಳಿಂದ ತಂದೆಯವರು ಆರಂಭಿಸಿದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದೇವೆ. ಕಂಬಳದ ಕೋಣಗಳನ್ನು ಕಟ್ಟುವುದರಲ್ಲಿ ಆರ್ಥಿಕ ಲಾಭವೇನೂ ಇಲ್ಲ, ಅದೊಂದು ವ್ಯರ್ಥ ಕೆಲಸ ಎಂದು ಕೆಲವರು ಹೇಳುತ್ತಾರೆ. ಆದರೆ ತಂದೆಯವರು ಆರಂಭಿಸಿದ ಈ ಸಂಪ್ರದಾಯವನ್ನು ಅರ್ಧದಲ್ಲೇ ನಿಲ್ಲಿಸಲು ಮನಸ್ಸಿಲ್ಲ. ನನ್ನ ನಂತರ ಮಗನೂ ಇದನ್ನು ಮುಂದುವರಿಸಲು ಸಿದ್ಧನಾಗಿದ್ದಾನೆ. ಈಗ ಬಹುತೇಕ ಕಂಬಳಗಳಿಗೆ ಅವನೇ ತೆರಳುತ್ತಾನೆ ಎಂದು ಭಾಸ್ಕರ್ ಸುಬ್ಬಯ್ಯ ಕೋಟ್ಯಾನ್ ಹೇಳುತ್ತಾರೆ.
ಹಿಂದೆ ಒಂದು ಕಂಬಳ 24 ಗಂಟೆಗಳೊಳಗೆ ಮುಕ್ತಾಯವಾಗುತ್ತಿತ್ತು. ಆದರೆ ಈಗ ಎರಡು ದಿನಗಳವರೆಗೂ ನಡೆಯುತ್ತಿದೆ. ಇದರಿಂದ ಕೋಣಗಳಿಗೆ ಹೆಚ್ಚಿನ ಆಯಾಸವಾಗುತ್ತದೆ. ಕಂಬಳದ ತಂಡಗಳಿಗೂ ನಿರ್ವಹಣೆಯ ದೃಷ್ಟಿಯಿಂದ ತೊಂದರೆಯಾಗುತ್ತದೆ. ಕಂಬಳದ ಜನಪ್ರಿಯತೆ ಹೆಚ್ಚುತ್ತಿರುವುದು ಸಂತಸದ ಸಂಗತಿಯಾದರೂ, ಕೋಣಗಳ ಆರೋಗ್ಯ ಮತ್ತು ಅವುಗಳ ಆರೈಕೆಯ ಬಗ್ಗೆಯೂ ಹೆಚ್ಚಿನ ಗಮನ ನೀಡಬೇಕಿದೆ ಎಂಬುದು ಅವರ ಅಭಿಪ್ರಾಯ.
ಮೂರು ತಲೆಮಾರುಗಳ ಬಾಂಧವ್ಯ:
ತಂದೆ ಕಟ್ಟಿದ ಕಂಬಳದ ಕೋಣಗಳ ಪರಂಪರೆಯನ್ನು ತಾನು ಮುಂದುವರಿಸಿದ್ದು, ಈಗ ಮಗನೂ ಅದೇ ಹಾದಿಯಲ್ಲಿ ಹೆಜ್ಜೆ ಇಡುತ್ತಿರುವುದು ಭಾಸ್ಕರ್ ಸುಬ್ಬಯ್ಯ ಕೋಟ್ಯಾನ್ ಅವರಿಗೆ ವಿಶೇಷ ಸಂತಸ ತಂದಿದೆ. ನಾಲ್ವರು ಸಹೋದರರ ಸಹಕಾರ, ಕುಟುಂಬದ ಒಗ್ಗಟ್ಟು ಹಾಗೂ ಕೋಣಗಳ ಮೇಲಿನ ಪ್ರೀತಿ ಈ ಸುದೀರ್ಘ ಪಯಣದ ಹಿಂದಿನ ಶಕ್ತಿಯಾಗಿದೆ.
ಕಂಬಳ ನಮ್ಮ ದೈವ-ದೇವರುಗಳಿಂದ ಬಂದ ಸಂಪ್ರದಾಯ. ಇದುವರೆಗೆ ಉತ್ತಮ ರೀತಿಯಲ್ಲಿ ನಡೆದುಕೊಂಡು ಬಂದಿದೆ. ಮುಂದೆಯೂ ಯಾವುದೇ ಅಡೆತಡೆಯಿಲ್ಲದೆ ಇದೇ ರೀತಿಯಲ್ಲಿ ಮುಂದುವರಿಯಬೇಕು. ನಮ್ಮಿಂದ ಸಾಧ್ಯವಾದಷ್ಟು ಕಾಲ ಈ ಪರಂಪರೆಯನ್ನು ಉಳಿಸಿ ಬೆಳೆಸುವುದೇ ನಮ್ಮ ಆಶಯ ಎನ್ನುತ್ತಾರೆ ಅವರು.
ನೂರಾರು ಪದಕಗಳು, ನೂರಾರು ಸ್ಪರ್ಧೆಗಳು, ಐದು ದಶಕಗಳ ಅನುಭವದ ನಡುವೆಯೂ ಅವರ ಆಸಕ್ತಿ ಮಾತ್ರ ಕಡಿಮೆಯಾಗಿಲ್ಲ. ತಂದೆಯಿಂದ ಮಗನಿಗೆ ಸಾಗುತ್ತಿರುವ ಈ ಕಂಬಳದ ನಂಟು ಕೇವಲ ಒಂದು ಕುಟುಂಬದ ಕಥೆಯಲ್ಲ; ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯ ಮೇಲಿನ ಪ್ರೀತಿ, ಬದ್ಧತೆ ಮತ್ತು ಪರಂಪರೆಯ ಅಭಿಮಾನದ ಜೀವಂತ ಚಿತ್ರಣವೂ ಹೌದು.















