ರಿಕ್ಷಾವೇ ಕಲೆಯ ಕ್ಯಾನ್ವಾಸ್; 12 ವರ್ಷಗಳಿಂದ ಜಯಕರ್ ಕುಂದರ್‌ರ ವಿಭಿನ್ನ ಪ್ರಯತ್ನ!

ಉಡುಪಿ: ಆಯುಧ ಪೂಜೆಯಂದು ವಾಹನಗಳಿಗೆ ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ ಕಟಪಾಡಿಯ ರಿಕ್ಷಾ ಚಾಲಕರೊಬ್ಬರು ಪ್ರತಿವರ್ಷ ತಮ್ಮ ರಿಕ್ಷಾವನ್ನೇ ವಿಭಿನ್ನ ಪರಿಕಲ್ಪನೆಗಳೊಂದಿಗೆ ಸಿಂಗರಿಸಿ, ಅದರ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರುತ್ತಿದ್ದಾರೆ. ಕಳೆದ 12 ವರ್ಷಗಳಿಂದ ಈ ವಿಶಿಷ್ಟ ಕಲಾತ್ಮಕ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿರುವವರು ಕಟಪಾಡಿ ಪೇಟೆಬೆಟ್ಟುವಿನ ಜಯಕರ್ ಕುಂದರ್.

ಹೌದು, ಇದು ಕೇವಲ ಪ್ರಯಾಣಿಕರನ್ನು ಹೊತ್ತೊಯ್ಯುವ ರಿಕ್ಷೆಯಲ್ಲ; ಹತ್ತಾರು ಕಲ್ಪನೆಗಳನ್ನು ಹೊತ್ತು ಸಾಗುವ ಕಲಾವಿದನ ಸೃಜನಶೀಲ ವೇದಿಕೆ. ಮೊದಲ ವರ್ಷ ಹೂವಿನ ಅಲಂಕಾರದೊಂದಿಗೆ ಆರಂಭವಾದ ಜಯಕರ್ ಅವರ ಈ ಕಲಾತ್ಮಕ ಪಯಣ, ಬಳಿಕ ಸಂಪೂರ್ಣ ವೀಳ್ಯದೆಲೆಗಳಿಂದ ರಿಕ್ಷಾವನ್ನು ಸಿಂಗರಿಸುವುದು, ಕೊರೋನಾ ಸಂದರ್ಭದಲ್ಲಿ ಬಲೂನ್‌ಗಳ ಅಲಂಕಾರದ ಮೂಲಕ ಹೊಸತನ ಪಡೆದುಕೊಂಡಿದೆ. ಹೀಗೆ ಪ್ರತಿವರ್ಷ ಒಂದೊಂದು ವಿಭಿನ್ನ ಪರಿಕಲ್ಪನೆಯೊಂದಿಗೆ ರಿಕ್ಷೆಯನ್ನು ಸಿದ್ಧಪಡಿಸುವುದು ಇವರ ವಿಶೇಷತೆ.

ಜಯಕರ್ ಅವರಿಗೆ ರಿಕ್ಷಾ ಚಾಲನೆ ಕೇವಲ ವೃತ್ತಿಯಾದರೆ, ಕಲೆ ಅವರ ಪ್ರವೃತ್ತಿ. ಅಷ್ಟಮಿ, ಗಣೇಶೋತ್ಸವ ಸೇರಿದಂತೆ ವಿವಿಧ ಹಬ್ಬಗಳ ಸಂದರ್ಭದಲ್ಲಿ ವಿಶಿಷ್ಟ ವೇಷಭೂಷಣಗಳನ್ನು ಧರಿಸಿ ಜನರ ಗಮನ ಸೆಳೆಯುವ ಇವರು, ಚಲನಚಿತ್ರದಲ್ಲೂ ನಟಿಸಿದ್ದಾರೆ.

ಮೈಸೂರು ದಸರಾ ಸಂದರ್ಭದಲ್ಲಿ ಅಂಬಾರಿ ಹೊತ್ತು ಸಾಗುತ್ತಿದ್ದ ಅರ್ಜುನ ಆನೆಯ ನಿಧನ ಇವರಿಗೆ ತೀವ್ರ ನೋವುಂಟು ಮಾಡಿತ್ತು. ಆ ನೋವನ್ನು ಕಲಾತ್ಮಕವಾಗಿ ಅಭಿವ್ಯಕ್ತಪಡಿಸುವ ಉದ್ದೇಶದಿಂದ ಅರ್ಜುನ ಆನೆಯ ಸ್ತಬ್ಧಚಿತ್ರವನ್ನು ರಿಕ್ಷಾದಲ್ಲಿ ರೂಪಿಸಿ ಒಂದು ವರ್ಷ ಸಂಚರಿಸಿದ್ದರು. ಅದೇ ರೀತಿ, ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ’ ಚಲನಚಿತ್ರದ ಯಶಸ್ಸಿನ ಸಂದರ್ಭದಲ್ಲಿ ಕಾಂತಾರ ಪರಿಕಲ್ಪನೆಯ ಸ್ತಬ್ಧಚಿತ್ರವನ್ನು ರಚಿಸಿ ಗಮನ ಸೆಳೆದಿದ್ದರು.

ಇತ್ತೀಚೆಗೆ ದುಬೈನಿಂದ ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ನಡೆದ ಸಂಘರ್ಷದ ವೇಳೆ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಾಛರ್ ಅವರು ತೀವ್ರ ಗಾಯಗಳ ನಡುವೆಯೂ ಧೈರ್ಯದಿಂದ ಹೋರಾಡಿ ಪ್ರಯಾಣಿಕರ ಜೀವ ಉಳಿಸಿದ ಸಾಹಸಗಾಥೆಯನ್ನೂ ತಮ್ಮ ರಿಕ್ಷಾದ ಅಲಂಕಾರದ ಮೂಲಕ ಜನರಿಗೆ ಪರಿಚಯಿಸಿದ್ದಾರೆ.

ಈ ಮೂಲಕ ವಿಮಾನಯಾನ ಸುರಕ್ಷತೆ, ಕರ್ತವ್ಯನಿಷ್ಠೆ ಹಾಗೂ ಸಂಕಷ್ಟದ ಸಂದರ್ಭದಲ್ಲಿನ ಧೈರ್ಯದ ಮಹತ್ವವನ್ನು ಸಾರುವ ಪ್ರಯತ್ನ ಮಾಡಿದ್ದಾರೆ.

ಕಲೆಯ ಮೂಲಕ ಸಾಮಾಜಿಕ ಕಾಳಜಿ:ಒಂದು ರಿಕ್ಷಾ, ಹನ್ನೆರಡು ವರ್ಷಗಳ ಕಲಾತ್ಮಕ ಪಯಣ, ಪ್ರತಿವರ್ಷ ಒಂದೊಂದು ಹೊಸ ಪರಿಕಲ್ಪನೆ. ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದರೂ ಪ್ರವೃತ್ತಿಯಲ್ಲಿ ಕಲಾವಿದರಾಗಿರುವ ಜಯಕರ್, ತಮ್ಮ ಬದುಕಿನ ಬಂಡಿಯಾದ ರಿಕ್ಷಾವನ್ನೇ ಕಲೆಯ ಅಭಿವ್ಯಕ್ತಿಗೆ ಹಾಗೂ ಸಾಮಾಜಿಕ ಜಾಗೃತಿಗೆ ವೇದಿಕೆಯನ್ನಾಗಿಸಿಕೊಂಡಿದ್ದಾರೆ.

ಮನರಂಜನೆಯ ಜತೆಗೆ ಸಮಾಜಕ್ಕೆ ಒಂದೊಂದು ಉತ್ತಮ ಸಂದೇಶ ನೀಡುವ ಇವರ ಪ್ರಯತ್ನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾನ್ಯ ರಿಕ್ಷಾವೊಂದನ್ನು ಅಸಾಮಾನ್ಯ ಕಲಾಕೃತಿಯನ್ನಾಗಿ ರೂಪಿಸುತ್ತಿರುವ ಜಯಕರ್ ಕುಂದರ್ ಅವರ ಸೃಜನಶೀಲತೆ ನಿಜಕ್ಕೂ ವಿಶೇಷ.