ವಿಶ್ವದ 50 ಮಾಲಿನ್ಯಯುಕ್ತ ನಗರಗಳಲ್ಲಿ ಭಾರತದ 49 ನಗರಗಳು; ಶ್ರೀಗಂಗಾನಗರಕ್ಕೆ ಮೊದಲ ಸ್ಥಾನ, ದೆಹಲಿಯೂ ಲಿಸ್ಟ್ ನಲ್ಲಿ!

ನವದೆಹಲಿ: ವಿಶ್ವದ 50 ಅತ್ಯಂತ ವಾಯುಮಾಲಿನ್ಯಯುಕ್ತ ನಗರಗಳ ಪಟ್ಟಿಯಲ್ಲಿ ಭಾರತದ 49 ನಗರಗಳು ಸ್ಥಾನ ಪಡೆದಿವೆ. ರಾಜಸ್ಥಾನದ ಶ್ರೀಗಂಗಾನಗರ ವಿಶ್ವದಲ್ಲೇ ಅತ್ಯಂತ ಮಾಲಿನ್ಯಯುಕ್ತ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿ 24ನೇ ಸ್ಥಾನದಲ್ಲಿದೆ.

ರಾಜಸ್ಥಾನದ ಶ್ರೀಗಂಗಾನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 821ಕ್ಕೆ ಏರಿಕೆಯಾಗಿದ್ದು, ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಪಂಜಾಬ್‌ನ ಬಟಿಂಡಾ 629 ಎಕ್ಯೂಐನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಹರಿಯಾಣದ ಸಿರ್ಸಾ 544 ಎಕ್ಯೂಐನೊಂದಿಗೆ ಮೂರನೇ ಸ್ಥಾನದಲ್ಲಿದೆ.

ಇನ್ನು ಹರಿಯಾಣದ ಹಿಸಾರ್‌ನಲ್ಲಿ 516 ಹಾಗೂ ಪಂಜಾಬ್‌ನ ಫರೀದ್‌ಕೋಟ್‌ನಲ್ಲಿ 506 ಎಕ್ಯೂಐ ದಾಖಲಾಗಿದೆ. ದೆಹಲಿ 393 ಎಕ್ಯೂಐನೊಂದಿಗೆ 24ನೇ ಸ್ಥಾನದಲ್ಲಿದೆ. ನವೆಂಬರ್ 9ರಂದು ದೆಹಲಿಯ ಎಕ್ಯೂಐ 663ಕ್ಕೆ ಏರಿಕೆಯಾಗಿತ್ತು.

ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಹಲವು ನಗರಗಳಲ್ಲಿ ವಾಯುಮಾಲಿನ್ಯ ತೀವ್ರಗೊಂಡಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿತ ಹಾಗೂ ಕೃಷಿ ತ್ಯಾಜ್ಯ ಸುಡುವಿಕೆಯಿಂದ ವಾಯುಮಾಲಿನ್ಯ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಈ ಪಟ್ಟಿಯಲ್ಲಿ ಭಾರತದ ಹೊರತಾಗಿ ಸ್ಥಾನ ಪಡೆದಿರುವ ಏಕೈಕ ನಗರ ಪಾಕಿಸ್ತಾನದ ಲಾಹೋರ್. 430 ಎಕ್ಯೂಐನೊಂದಿಗೆ ಲಾಹೋರ್ 14ನೇ ಸ್ಥಾನ ಪಡೆದುಕೊಂಡಿದೆ.