ಮಂಗಳೂರು: ಆಹಾರ ಸುರಕ್ಷತಾ ಇಲಾಖೆಯಿಂದ ದಿಢೀರ್ ದಾಳಿ: ಕಾಲೇಜು ಕ್ಯಾಂಟೀನ್, ಮುಲ್ಕಿ ಬೇಕರಿಗಳ ಪರಿಶೀಲನೆ

ಮಂಗಳೂರು: ಆಸ್ಪತ್ರೆ, ಕಾಲೇಜು ಕ್ಯಾಂಟೀನ್‌ ಹಾಗೂ ಬೇಕರಿಗಳಲ್ಲಿ ಸಾರ್ವಜನಿಕರಿಗೆ ಪೂರೈಸಲಾಗುವ ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಇಲಾಖೆಯು ಮುಕ್ಕ ಹಾಗೂ ಮುಲ್ಕಿ ವ್ಯಾಪ್ತಿಯಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿದೆ

ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ಅವರ ನೇತೃತ್ವದ ತನಿಖಾ ತಂಡವು ಈ ವಿಶೇಷ ಪರಿಶೀಲನಾ ಅಭಿಯಾನವನ್ನು ಕೈಗೊಂಡಿದೆ.

ಮುಕ್ಕ ಶ್ರೀನಿವಾಸ ಮೆಡಿಕಲ್ ಕಾಲೇಜು ಕ್ಯಾಂಟೀನ್, ಮೆಸ್ ಪರಿಶೀಲನೆ: ಸುರತ್ಕಲ್ ಸಮೀಪದ ಮುಕ್ಕದಲ್ಲಿರುವ ಶ್ರೀನಿವಾಸ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕ್ಯಾಂಟೀನ್ ಹಾಗೂ ಹಾಸ್ಟೆಲ್ ಮೆಸ್‌ನ ಅಡುಗೆ ಕೋಣೆಗಳಿಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಕೂಲಂಕಷ ಪರಿಶೀಲನೆ ನಡೆಸಿತು.

ಆಹಾರ ಹಾಗೂ ನೀರಿನ ಮಾದರಿ ಸಂಗ್ರಹ: ಅಡುಗೆ ತಯಾರಿಸಲು ಬಳಸಲಾಗುವ ಕಚ್ಚಾ ಆಹಾರ ಸಾಮಗ್ರಿಗಳ ಮಾದರಿಗಳು ಮತ್ತು ಕುಡಿಯುವ ನೀರಿನ ಮಾದರಿಯನ್ನು ಸಂಗ್ರಹಿಸಿ, ಗುಣಮಟ್ಟ ಪರೀಕ್ಷೆಗಾಗಿ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

ರೋಗಿಗಳಿಗೆ ಪೌಷ್ಟಿಕ, ಸುರಕ್ಷಿತ ಆಹಾರ: ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಅತ್ಯಂತ ಉತ್ತಮ ಗುಣಮಟ್ಟದ, ಶುಚಿ-ರುಚಿಯಾದ ಹಾಗೂ ಸುರಕ್ಷಿತ ಆಹಾರವನ್ನು ತಯಾರಿಸಿ ನೀಡಬೇಕೆಂದು ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

ಸಿಬ್ಬಂದಿ ಸ್ವಚ್ಛತೆ ಮತ್ತು ಆರೋಗ್ಯ ಪರೀಕ್ಷೆ: ಆಹಾರ ತಯಾರಿಸುವ ಮತ್ತು ಸರಬರಾಜು ಮಾಡುವ ನೌಕರರು ಕಡ್ಡಾಯವಾಗಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ನಿಯಮಿತವಾಗಿ ವೈದ್ಯಕೀಯ ತಪಾಸಣೆ ನಡೆಸಿ ಆರೋಗ್ಯ ದೃಢೀಕರಣ ಪತ್ರಗಳನ್ನು ಸಲ್ಲಿಸಬೇಕು ಎಂದು ನಿರ್ದೇಶಿಸಲಾಯಿತು.

ಕಾಯ್ದೆ ಪಾಲನೆಗೆ ಸೂಚನೆ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಎಲ್ಲಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಾಕೀತು ಮಾಡಲಾಯಿತು.

ಮುಲ್ಕಿ ಕಾರ್ನಾಡ್ ವ್ಯಾಪ್ತಿಯ ಬೇಕರಿಗಳ ಮೇಲೂ ದಾಳಿ: ಹಬ್ಬಗಳ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ಸಿಹಿ ತಿಂಡಿಗಳು ಮಾರಾಟವಾಗುವುದನ್ನು ಗಮನದಲ್ಲಿಟ್ಟುಕೊಂಡು, ಮುಲ್ಕಿ ಕಾರ್ನಾಡ್ ವ್ಯಾಪ್ತಿಯಲ್ಲಿರುವ ಬೇಕರಿಗಳ ಮೇಲೂ ಆಹಾರ ಸುರಕ್ಷತಾ ತಂಡವು ವಿಶೇಷ ಕಾರ್ಯಾಚರಣೆ ನಡೆಸಿತು.

ಕೃತಕ ಬಣ್ಣಗಳ ಬಳಕೆಗೆ ಬ್ರೇಕ್: ಸಿಹಿ ತಿಂಡಿಗಳಿಗೆ ಅಪಾಯಕಾರಿ ರಾಸಾಯನಿಕಯುಕ್ತ ಕೃತಕ ಬಣ್ಣಗಳನ್ನು ಬಳಸಬಾರದು ಎಂದು ಬೇಕರಿ ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಯಿತು.

ಸಂಶಯಾಸ್ಪದ ಸ್ವೀಟ್ಸ್ ಸೀಜ್: ಬಣ್ಣಗಳನ್ನು ಬಳಸಿ ತಯಾರಿಸಲಾಗಿದ್ದ ಸಂಶಯಾಸ್ಪದ ಸಿಹಿ ತಿಂಡಿಗಳನ್ನು ಸ್ಥಳದಲ್ಲೇ ಸೀಜ್ ಮಾಡಿ, ಸೀಲ್ ಹಾಕಿ ಪರೀಕ್ಷೆಗಾಗಿ ಆಹಾರ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಶುಚಿತ್ವ ಲೋಪ – ನೋಟಿಸ್ ಜಾರಿ: ಬೇಕರಿ ಮತ್ತು ತಿಂಡಿ ತಯಾರಿಕಾ ಘಟಕಗಳಲ್ಲಿ ಸಮರ್ಪಕ ಶುಚಿತ್ವ ಕಾಪಾಡಿಕೊಳ್ಳದ ಬೇಕರಿಗಳಿಗೆ ಇಲಾಖೆಯ ವತಿಯಿಂದ ತಕ್ಷಣವೇ ನೋಟಿಸ್ ಜಾರಿಗೊಳಿಸಲಾಗಿದೆ.