ಪಟಾಕಿ ಪ್ರಿಯರೇ ಇಲ್ಲಿ ಸ್ವಲ್ಪ ಗಮನಿಸಿ: ಪಟಾಕಿ ಸದ್ದಿಗೆ ಬೆಚ್ಚಿಬಿದ್ದು 14ನೇ ಮಹಡಿಯಿಂದ ಬಿದ್ದ ನಾಯಿ ಸಾವು!

ಬೆಂಗಳೂರು: ಪಟಾಕಿಗೆ ಜಾಸ್ತಿ ಆದ್ಯತೆ ನೀಡದೇ ಹಬ್ಬ ಆಚರಿಸಿ ಎಂದು ಇಡೀ ದೇಶದಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದ್ದರೂ ಪಟಾಕಿಯಿಂದ ಆಗುವ ಅನಾಹುತಗಳು ಮತ್ತೆ ಮತ್ತೆ ಕೇಳುತ್ತಲೇ ಇದೆ. ಮುಖ್ಯವಾಗಿ ಸಾಕು ಪ್ರಾಣಿಗಳು ಪಟಾಕಿ ಸದ್ದಿಗೆ ಹೆದರಿ ಸಾವನ್ನಪ್ಪುತ್ತವೆ. ಅಂತದ್ದೇ ಪ್ರಕರಣವೊಂದು ಈಗ ವರದಿಯಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಹಸಿರು ಪಟಾಕಿಗಳನ್ನು ಸಿಡಿಸಬೇಕು ಎಂದು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ, ಬೆಂಗಳೂರಿನಲ್ಲಿ ಮಾತ್ರ ನಿಗದಿತ ಸಮಯ ಮೀರಿ ಪಟಾಕಿ ಸಿಡಿಸುವ ಹಾವಳಿ ಮುಂದುವರಿದಿದೆ. ಪಟಾಕಿಗಳ ಭಾರೀ ಶಬ್ದಕ್ಕೆ ಬೆಚ್ಚಿಬಿದ್ದ ಬೀದಿ ನಾಯಿಯೊಂದು 14 ಅಂತಸ್ತಿನ ಕಟ್ಟಡದಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಗರದ ಕನ್ನಮಂಗಲದಲ್ಲಿ ನಡೆದಿದೆ.

ನಿರ್ಮಾಣ ಹಂತದಲ್ಲಿರುವ 14 ಅಂತಸ್ತಿನ ಕಟ್ಟಡದಲ್ಲಿ ಹೆಣ್ಣು ನಾಯಿಯೊಂದು ವಾಸವಾಗಿತ್ತು. ಕಟ್ಟಡದ ಭದ್ರತಾ ಸಿಬ್ಬಂದಿಯ ನೆರವಿನಿಂದ ಪ್ರಾಣಿ ಪ್ರಿಯರೊಬ್ಬರು ನಾಯಿಯ ಆರೈಕೆ ಮಾಡುತ್ತಿದ್ದರು. ಎರಡು ತಿಂಗಳ ಹಿಂದಷ್ಟೇ ಅದಕ್ಕೆ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನೂ ಮಾಡಿಸಲಾಗಿತ್ತು.

ನವೆಂಬರ್ 6ರ ಶುಕ್ರವಾರ ರಾತ್ರಿ ಪಟಾಕಿಗಳ ಭಾರೀ ಶಬ್ದಕ್ಕೆ ಬೆಚ್ಚಿಬಿದ್ದ ನಾಯಿ, ನಿದ್ರೆಯಲ್ಲಿದ್ದಾಗಲೇ ಕಟ್ಟಡದ ಮೇಲಿನಿಂದ ಕೆಳಕ್ಕೆ ಜಿಗಿದಿರಬಹುದು ಎಂದು ಶಂಕಿಸಲಾಗಿದೆ. ಶನಿವಾರ ಬೆಳಗ್ಗೆ ಅದರ ಮೃತದೇಹ ಪತ್ತೆಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪ್ರಾಣಿ ಪ್ರಿಯರೊಬ್ಬರು, “ನಾಯಿ ಇಷ್ಟು ದಿನ ಕಟ್ಟಡದಲ್ಲಿ ಸುರಕ್ಷಿತವಾಗಿಯೇ ಇತ್ತು. ಯಾವುದೇ ತೊಂದರೆಯಿಲ್ಲದೆ ವಾಸಿಸುತ್ತಿತ್ತು. ಆದರೆ, ಪಟಾಕಿಗಳ ಶಬ್ದಕ್ಕೆ ಹೆದರಿ ಈ ದುರಂತ ಸಂಭವಿಸಿದೆ” ಎಂದು ತಿಳಿಸಿದ್ದಾರೆ.

ಮನುಷ್ಯರಿಗಿಂತ ನಾಯಿಗಳಿಗೆ ಶಬ್ದ ಗ್ರಹಿಸುವ ಸಾಮರ್ಥ್ಯ ಸುಮಾರು ನಾಲ್ಕು ಪಟ್ಟು ಹೆಚ್ಚಿರುತ್ತದೆ. ಬ್ರಿಟನ್‌ನ ಪ್ರಾಣಿ ಹಿಂಸೆ ತಡೆಗಟ್ಟುವ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ, ಮನುಷ್ಯರಿಗೆ ಸಾಮಾನ್ಯವೆನಿಸುವ ದೊಡ್ಡ ಶಬ್ದಗಳೂ ನಾಯಿಗಳಲ್ಲಿ ತೀವ್ರ ಭಯವನ್ನು ಉಂಟುಮಾಡಬಹುದು.

ಪಟಾಕಿಗಳ ಸ್ಫೋಟದ ಸದ್ದು ನಾಯಿಗಳಿಗೆ ಗ್ರೆನೇಡ್ ಸ್ಫೋಟದಂತೆ ಭಾಸವಾಗುತ್ತದೆ. ಇದರಿಂದ ಅವುಗಳಲ್ಲಿ ಭಯ, ಗೊಂದಲ, ಆತಂಕ, ಚಡಪಡಿಕೆ ಹಾಗೂ ಕೆಲವೊಮ್ಮೆ ಆಕ್ರಮಣಕಾರಿ ವರ್ತನೆಯೂ ಕಾಣಿಸಿಕೊಳ್ಳುತ್ತದೆ. ಭಾರತದಲ್ಲಿ ಕಾನೂನುಬದ್ಧ ಪಟಾಕಿಗಳ ಶಬ್ದದ ಮಿತಿ 125 ಡೆಸಿಬಲ್‌ಗಳಷ್ಟಿದ್ದು, ಈ ಪ್ರಮಾಣದ ಶಬ್ದವೂ ಪ್ರಾಣಿಗಳಿಗೆ ತೀವ್ರ ತೊಂದರೆ ಉಂಟುಮಾಡಬಹುದು.

ಇದೇ ಕನ್ನಮಂಗಲದಲ್ಲಿ ಮತ್ತೊಂದು ನಾಯಿಯೂ ಪಟಾಕಿ ಸದ್ದಿಗೆ ಬೆದರಿ ನಾಪತ್ತೆಯಾಗಿದೆ. ಕುಟುಂಬವೊಂದು ತಮ್ಮ ಸಾಕು ನಾಯಿಯನ್ನು ವಾಯುವಿಹಾರಕ್ಕೆ ಕರೆದೊಯ್ದಿದ್ದ ಸಂದರ್ಭದಲ್ಲಿ ಏಕಾಏಕಿ ಪಟಾಕಿ ಸಿಡಿಸಲಾಗಿದೆ. ಭಾರೀ ಶಬ್ದಕ್ಕೆ ಬೆಚ್ಚಿಬಿದ್ದ ನಾಯಿ, ಅದನ್ನು ಹಿಡಿದಿದ್ದ ವ್ಯಕ್ತಿಯಿಂದ ತಪ್ಪಿಸಿಕೊಂಡು ಓಡಿಹೋಗಿದೆ. ಇದರಿಂದ ಕುಟುಂಬದವರು ತೀವ್ರ ದುಃಖಕ್ಕೊಳಗಾಗಿದ್ದಾರೆ ಎಂದು ಪ್ರಾಣಿ ಪ್ರಿಯರು ತಿಳಿಸಿದ್ದಾರೆ.

ಸರ್ಕಾರದ ಆದೇಶ ಕೇವಲ ಕಾಗದಕ್ಕೆ ಸೀಮಿತ: ಪ್ರಾಣಿ ಹಕ್ಕುಗಳ ಹೋರಾಟಗಾರರ ಆಕ್ರೋಶ

ಪ್ರತಿ ವರ್ಷ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಸರ್ಕಾರದ ಆದೇಶಗಳು ಕೇವಲ ಕಾಗದಕ್ಕೆ ಸೀಮಿತವಾಗಿವೆ. ಯಾವುದೇ ವಿರಾಮವಿಲ್ಲದೆ ನಿರಂತರವಾಗಿ ಪಟಾಕಿ ಸಿಡಿಸಲಾಗುತ್ತಿದೆ. ಅದರಲ್ಲೂ ಭಾರೀ ಶಬ್ದ ಮಾಡುವ ಪಟಾಕಿಗಳ ಅಬ್ಬರದಿಂದ ಪ್ರಾಣಿಗಳ ಆರೈಕೆ ಮಾಡುವುದು ಕಷ್ಟವಾಗುತ್ತಿದೆ. ನಾಯಿಗಳು ಅಡಗಿಕೊಳ್ಳಲು ಸುರಕ್ಷಿತ ಸ್ಥಳಗಳೂ ಇಲ್ಲ ಎಂದು ಸಹವರ್ತಿನ್ ಪ್ರಾಣಿ ಕಲ್ಯಾಣ ಟ್ರಸ್ಟ್‌ನ ಸಂಸ್ಥಾಪಕಿ ಸಾಧನಾ ಹೆಗ್ಡೆ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಉತ್ತರ ನಗರ ಪಾಲಿಕೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ಎಚ್.ಕೆ. ಗಂಗಾಧರಯ್ಯ, ಪ್ರಾಣಿಗಳ ಆಶ್ರಯ ತಾಣವು ಜನವಸತಿ ಪ್ರದೇಶಗಳಿಂದ ದೂರದಲ್ಲಿರುವುದರಿಂದ ಈವರೆಗೆ ಇಂತಹ ಯಾವುದೇ ತೊಂದರೆಗಳು ಎದುರಾಗಿಲ್ಲ. ಆದರೂ ಕಿಡಿಗೇಡಿಗಳ ಕೃತ್ಯಗಳನ್ನು ತಡೆಯುವ ಮುನ್ನೆಚ್ಚರಿಕೆಯ ಕ್ರಮವಾಗಿ ಆಶ್ರಯ ತಾಣದಲ್ಲಿ ಈಗಾಗಲೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಪಟಾಕಿಗಳ ಹಾವಳಿಯಿಂದ ಸ್ಥಳೀಯ ನಿವಾಸಿಗಳೂ ನೆಮ್ಮದಿ ಕಳೆದುಕೊಂಡಿದ್ದಾರೆ. ನಿರಂತರ ಸದ್ದಿನಿಂದ ಬೇಸತ್ತ ಅನೇಕರು ಪೊಲೀಸರ ಮೊರೆ ಹೋಗುತ್ತಿದ್ದಾರೆ. ಕೋರಮಂಗಲದ 4ನೇ ಬ್ಲಾಕ್‌ನಲ್ಲಿ ಶನಿವಾರ ರಾತ್ರಿ ಸುಮಾರು 11.45ರ ವೇಳೆಗೆ ಕೆಲ ಯುವಕರು ಪಟಾಕಿ ಸಿಡಿಸಲು ಆರಂಭಿಸಿದ್ದಾರೆ.

ಎಲ್ಲರೂ ನಿದ್ರೆಗೆ ಜಾರಿದ ಸಮಯವನ್ನೇ ಕಾಯುತ್ತಿದ್ದರೇನೋ ಎಂಬಂತೆ ತಡರಾತ್ರಿಯಲ್ಲಿ ಪಟಾಕಿ ಸಿಡಿಸಿದ್ದಾರೆ. ಸುಮಾರು ಒಂದು ಗಂಟೆ ಕಾಲ ಈ ಹಾವಳಿ ಮುಂದುವರಿದ ಹಿನ್ನೆಲೆಯಲ್ಲಿ ನಿವಾಸಿಯೊಬ್ಬರು 112ಕ್ಕೆ ಕರೆ ಮಾಡಿದ್ದಾರೆ. ಆದರೆ, ಹೊಯ್ಸಳ ಪೊಲೀಸರ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಪಟಾಕಿ ಸಿಡಿಸುತ್ತಿದ್ದವರು ಅಲ್ಲಿಂದ ತೆರಳಿದ್ದರು ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.