ಸಾರ್ವಜನಿಕ ಹಿತಾಸಕ್ತಿಗೆ ಸಂಬoಧಿಸಿದ ಅಹವಾಲುಗಳನ್ನು ಆದ್ಯತೆಯ ಮೇಲೆ ಬಗೆಹರಿಸಿ: ಶಾಸಕ ಸುನಿಲ್ ಕುಮಾರ್

ಉಡುಪಿ: ಆಡಳಿತದಲ್ಲಿ ಸುಧಾರಣೆ ತರುವುದರೊಂದಿಗೆ ಜನರ ಅಹವಾಲುಗಳನ್ನು ಸ್ಥಳದಲ್ಲಿಯೇ ನಿವಾರಿಸಲು, ಸರಕಾರವು ವಿನೂತನ ಪ್ರಜಾಸೇವಾ ಆಂದೋಲನ ಸಭೆಗಳನ್ನು ಆಯೋಜಿಸುತ್ತಾ ಬರುತ್ತಿದೆ. ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳು ಸಾರ್ವಜನಿಕ ಹಿತಾಸಕ್ತಿಗೆ ಸಂಬoಧಿಸಿದ್ದಾಗಿದ್ದು, ಅವುಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು.

ಅವರು ಇಂದು ಎರ್ಲಪಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ, ಪ್ರಜಾಸೇವಾ ಇಲಾಖೆ ತಾಲೂಕು ಆಡಳಿತ ಕಾರ್ಕಳ ಇವರ ವತಿಯಿಂದ ಅಜೆಕಾರು ಹೋಬಳಿಗೆ ಸಂಬoಧಿಸಿದoತೆ ನಡೆದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸರಕಾರವೇ ಜನರ ಬಳಿ ಬರಬೇಕು, ತನ್ಮೂಲಕ ಅವರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲಿಯೇ ಪರಿಹಾರ ನೀಡಬೇಕು ಎಂಬ ಆಶಯದಂತೆ ಪ್ರಜಾಸೇವಾ ಆಂದೋಲನ ಸಭೆಗಳನ್ನು ಎಲ್ಲಾ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಪ್ರತೀ ಶನಿವಾರ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದ ಅವರು, ಜನರ ಸಮಸ್ಯೆಗಳನ್ನು ಅರಿಯಲು ಇದೊಂದು ಉತ್ತಮ ಅವಕಾಶವಾಗಿದೆ ಎಂದರು.

ಪ್ರಜಾಸೇವಾ ಆಂದೋಲನ ಸಭೆಗಳಲ್ಲಿ ಬರುವ ಅರ್ಜಿಗಳನ್ನು ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸೂಕ್ತ ನ್ಯಾಯ ಒದಗಿಸಬೇಕು, ಆಗಮಾತ್ರ ಪ್ರಜಾಸೇವೆ ಕಾರ್ಯಕ್ರಮ ಯಶಸ್ಸು ಸಾಧಿಸಲಿವೆ. ಯಾವುದೇ ಅರ್ಜಿಗಳನ್ನು ಇಲಾಖೆಯಿಂದ ಇಲಾಖೆಗೆ ವರ್ಗಾಯಿಸುವ ಕೆಲಸ ಅಧಿಕಾರಿಗಳು ಮಾಡಬಾರದು. ಸಾಮಾನ್ಯ ಜನ ನೀಡುವ ಅಹವಾಲುಗಳಿಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡಿ ಪರಿಹರಿಸಬೇಕು ಎಂದರು.

ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ರಾಜ್ಯ ಸರಕಾರವು ಅತ್ಯುತ್ತಮ ಯೋಜನೆಯಾದ ಪ್ರಜಾಸೇವಾ ಆಂದೋಲನ ಸಭೆಗಳನ್ನು ಅನುಷ್ಠಾನಗೊಳಿಸಿದೆ. ಅಧಿಕಾರಿಗಳು ನೇರವಾಗಿ ಜನರ ಬಳಿಗೆ ಬಂದು, ಇಡೀ ಸರಕಾರದ ವ್ಯವಸ್ಥೆಯನ್ನು ಅವರ ಮುಂದೆ ತಂದು, ಜನಸಾಮಾನ್ಯರು ಯಾವ ಯಾವ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಆಲಿಸಿ, ಅದನ್ನು ಪರಿಹರಿಸುವ ಕೆಲಸ ಮಾಡಲಾಗುತ್ತಿದೆ.

ಸರ್ವೇ, ಕಂದಾಯ, ಅರಣ್ಯ ಇಲಾಖೆ, ಆಧಾರ್, ರೇಶನ್ ಕಾರ್ಡ್ ಸೇರಿದಂತೆ ಮತ್ತಿತರ ಸಮಸ್ಯೆಗಳು ಹೆಚ್ಚಾಗಿ ಸಭೆಗಳಲ್ಲಿ ದಾಖಲಾಗುತ್ತಿದ್ದು, ಅವುಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಬೇಕು. ಸಣ್ಣ- ಪುಟ್ಟ ಸಮಸ್ಯೆಗಳನ್ನು ಅಧಿಕಾರಿಗಳು ತಮ್ಮ ಹಂತದಲ್ಲಿಯೇ ಬಗೆಹರಿಸಿದಾಗ ಬಹಳಷ್ಟು ಜನರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ ಎಂದರು.

ಜನರು ನೆಮ್ಮದಿಯಿಂದ ಬದುಕಬೇಕು, ಅವರ ಜೀವನ ಸುಲಲಿತವಾಗಿ ನಡೆಯಬೇಕು ಎನ್ನುವುದು ಸರಕಾರದ ಉದ್ದೇಶ. ದೇವರ ಸೇವೆ ರೂಪದಲ್ಲಿ ಜನರ ಸೇವೆ ಮಾಡಬೇಕು. ಜಿಲ್ಲೆಯಲ್ಲಿ ಅತ್ಯುತ್ತಮ ದಕ್ಷ ಅಧಿಕಾರಿಗಳ ತಂಡ ಇದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಎಲ್ಲರೂ ಒಟ್ಟಾಗಿ ಸೇರಿ ಜನರ ಸಮಸ್ಯೆ ಪರಿಹರಿಸಬೇಕು. ಪ್ರಜಾಸೇವಾ ಸಭೆಗಳಲ್ಲಿ ಬರುವ ಅರ್ಜಿಗಳಿಗೆ ಹಿಂಬರಹ ನೀಡುವುದರೊಂದಿಗೆ ಅದಕ್ಕೆ ಪರಿಹಾರ ನೀಡುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಪ್ರಸ್ತಾವಿಕವಾಗಿ ಮಾತನಾಡಿ, ಸರಕಾರದ ಮಹತ್ವಾಕಾಂಕ್ಷಿ ಪ್ರಜಾಸೇವಾ ಆಂದೋಲನ ಸಭೆಗಳನ್ನು ಪ್ರತೀ ಶನಿವಾರ ಆಯೋಜಿಸುವ ಮೂಲಕ ಸಾರ್ವಜನಿಕರ ಅಹವಾಲುಗಳಿಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ. ಸಭೆಗಳಲ್ಲಿ ಸ್ವೀಕೃತವಾಗುವ ಎಲ್ಲಾ ಅರ್ಜಿಗಳನ್ನು ಐ.ಪಿ.ಜಿ.ಆರ್.ಎಸ್ ಪೋರ್ಟಲ್ ನಲ್ಲಿ ಅಪ್‌ಲೋಡ್ ಮಾಡಲಾಗುವುದು. ಅಲ್ಲದೇ ಪ್ರತೀ ಬುಧವಾದ ಬೆಳಗ್ಗೆ 9-11 ರ ವರೆಗೆ ತಹಶೀಲ್ದಾರ್, ಬೆ. 11 ರಿಂದ ಮ.1 ರ ವರೆಗೆ ಸಹಾಯಕ ಕಮೀಷನರ್ ಹಾಗೂ ಮ. 3-5 ರ ವರೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ಸಾರ್ವಜನಿಕರು ಸಭೆ ನಡೆಯುವ ಒಂದು ವಾರದ ಮುಂಚಿತವಾಗಿ ಅರ್ಜಿಗಳನ್ನು ಗ್ರಾಮ ಪಂಚಾಯತ್‌ಗಳಿಗೆ ಸಲ್ಲಿಸಿದ್ದಲ್ಲಿ, ಪಂಚಾಯತ್ ಸಿಬ್ಬಂದಿಗಳು ಟೋಕನ್ ಸಂಖ್ಯೆ ನೀಡಲಿದ್ದು, ಸಾರ್ವಜನಿಕರು ಸಭೆ ನಡೆಯುವ ದಿನದಂದು ಟೋಕನ್ ಸಲ್ಲಿಸಿದ್ದಲ್ಲಿ ಅಧಿಕಾರಿಗಳು ಮುಂಚಿತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನುಕೂಲವಾಗಲಿದೆ.

ಸಾರ್ವಜನಿಕರಿಂದ ಬರುವ ಅಹವಾಲುಗಳನ್ನು ಸರಿಯಾದ ರೀತಿಯಲ್ಲಿ ವರ್ಗೀಕರಣ ಮಾಡಬೇಕು. ಅಧಿಕಾರಿಗಳು ಸಾರ್ವಜನಿಕರಿಗೆ ನೀಡುವ ಉತ್ತರವನ್ನು ವೈಯಕ್ತಿಕವಾಗಿ ಪರಿಶೀಲಿಸಿದ್ದು, ಬಂದoತಹ 2400 ಕ್ಕೂ ಅಧಿಕ ಅರ್ಜಿಗಳಲ್ಲಿ 1700 ಅರ್ಜಿಗಳನ್ನು ವಾಪಾಸು ಅಧಿಕಾರಿಗಳಿಗೆ ನೀಡಲಾಗಿದೆ ಎಂದ ಅವರು, ಸೇವೆಯೇ ನಮ್ಮ ಧರ್ಮ ಎಂಬ ಮನೋಭಾವದಿಂದ ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಿ ನಿಗಧಿತ ಕಾಲಾವಧಿಯ ಒಳಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕು ಎಂದರು. ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬoಧಿಸಿದoತೆ 23 ಅರ್ಜಿಗಳು ಸ್ವೀಕೃತವಾಗಿದ್ದವು.

ಸಭೆಯಲ್ಲಿ ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ, ಜಿಲ್ಲಾ ಪಂಚಾಯತ್ ಸಿ.ಇ.ಒ ಪ್ರತೀಕ್ ಬಾಯಲ್, ಎಎಸ್‌ಪಿ ಸುಧಾಕರ್ ನಾಯಕ್, ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ವರಿಷ್ಟಾಧಿಕಾರಿ ಇಶಿತಾ ಗುಪ್ತ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೊಳ್ಳಿ, ಕುಂದಾಪುರ ವಿಭಾಗದ ಎಸಿಎಫ್ ಶಶಿಕಾಂತ್ ವಿಭುದೆ, ತಹಶೀಲ್ದಾರ್ ರಾಕೇಶ್ ಪ್ರಾನ್ಸಿಸ್ ಬ್ರಿಟ್ಟೋ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಪಿಡಿಓ ಪ್ರತಾಪ್ ಶೆಟ್ಟಿ ಸ್ವಾಗತಿಸಿ, ಡೆಪ್ಯೂಟಿ ತಹಶೀಲ್ದಾರ್ ನಳಿನಿ ನಿರೂಪಿಸಿ, ಇ.ಒ ಪ್ರಶಾಂತ್ ಸಿ ರಾವ್ ವಂದಿಸಿದರು.