E20 ಅಲ್ಲ ಇದು 420, ಕರ್ನಾಟಕದ ಪೆಟ್ರೋಲ್‌ನಲ್ಲಿ ವಿಪರೀತ ಎಥೆನಾಲ್ ಮಿಶ್ರಣದ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ರಾಹುಲ್ ಗಾಂಧಿ

ನವದೆಹಲಿ: ಪೆಟ್ರೋಲ್‌ನಲ್ಲಿ ಶೇಕಡಾ 20ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಕೇಂದ್ರ ಸರ್ಕಾರದ ಹೇಳಿಕೆಗೆ ವ್ಯತಿರಿಕ್ತವಾಗಿ, ಕರ್ನಾಟಕದಲ್ಲಿ ನಡೆಸಿದ ಇಂಧನ ಮಾದರಿಗಳ ಪರೀಕ್ಷೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಎಥೆನಾಲ್ ಪತ್ತೆಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಕರ್ನಾಟಕದ ಏಳು ಜಿಲ್ಲೆಗಳಿಂದ ಸಂಗ್ರಹಿಸಿದ 14 ಪೆಟ್ರೋಲ್ ಮಾದರಿಗಳಲ್ಲಿ 11 ಮಾದರಿಗಳಲ್ಲಿ ಶೇಕಡಾ 20ಕ್ಕಿಂತ ಹೆಚ್ಚು ಎಥೆನಾಲ್ ಅಂಶ ಕಂಡುಬಂದಿದೆ ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಮಾರಾಟವಾಗುತ್ತಿರುವ ಪೆಟ್ರೋಲ್‌ನಲ್ಲಿ ನಿಜವಾಗಿಯೂ ಎಷ್ಟು ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬುದನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

‘ಇ20 ಈಗ 420 (ವಂಚನೆ) ಆಗಿದೆ. ಸಾರ್ವಜನಿಕರ ವಾಹನಗಳಿಂದ ಪೆಟ್ರೋಲ್ ಕದಿಯಲಾಗುತ್ತಿದೆ’ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಇಲ್ಲಿ 420 ಎಂಬುದು ವಂಚನೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ (ಐಪಿಸಿ) 420ನೇ ಕಲಂ ಅನ್ನು ಉಲ್ಲೇಖಿಸುತ್ತದೆ.

14 ಮಾದರಿಗಳಲ್ಲಿ 11ರಲ್ಲಿ ಮಿತಿ ಮೀರಿದ ಎಥೆನಾಲ್ ಪತ್ತೆ?

ಕರ್ನಾಟಕದಲ್ಲಿ ನಡೆಸಿದ ಪರೀಕ್ಷೆಯ ವರದಿಯನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ, ಸರ್ಕಾರಿ ಮತ್ತು ಖಾಸಗಿ ತೈಲ ಕಂಪನಿಗಳ ಪೆಟ್ರೋಲ್ ಬಂಕ್‌ಗಳಿಂದ ಮಾದರಿಗಳನ್ನು ಸಂಗ್ರಹಿಸಿ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

ವರದಿಯ ಪ್ರಕಾರ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಪೆಟ್ರೋಲ್ ಮಾದರಿಯಲ್ಲಿ ಶೇಕಡಾ 31.2 ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (HPCL) ಮಾದರಿಯಲ್ಲಿ ಶೇಕಡಾ 30.5ರಷ್ಟು ಎಥೆನಾಲ್ ಪತ್ತೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ. IOCL, HPCL, BPCL ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ಕಂಪನಿಗಳು ಮಾರಾಟ ಮಾಡುವ ಇಂಧನದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣವಾಗಿರುವುದಾಗಿ ಪಟ್ಟಿಯೊಂದನ್ನೂ ಹಂಚಿಕೊಂಡಿದ್ದಾರೆ.

ಇದಲ್ಲದೆ, ಆಯಾ ತೈಲ ಕಂಪನಿಗಳು ತಮ್ಮ ಪ್ರಯೋಗಾಲಯದ ವರದಿ ಹಾಗೂ ಪೆಟ್ರೋಲ್‌ನಲ್ಲಿರುವ ಎಥೆನಾಲ್ ಪ್ರಮಾಣದ ಮಾಹಿತಿಯನ್ನು ಗ್ರಾಹಕರಿಗೆ ನೀಡುತ್ತಿಲ್ಲ ಎಂದು ದೂರಿದ್ದಾರೆ.

ವಾಹನಗಳ ಮೈಲೇಜ್ ಮತ್ತು ನಿರ್ವಹಣಾ ವೆಚ್ಚದ ಆತಂಕ

ಪೆಟ್ರೋಲ್‌ನಲ್ಲಿ ಅತಿಯಾದ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡುವುದರಿಂದ ವಾಹನಗಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು. ಇದರಿಂದ ಮೈಲೇಜ್ ಕಡಿಮೆಯಾಗುವ ಜೊತೆಗೆ ವಾಹನಗಳ ನಿರ್ವಹಣಾ ವೆಚ್ಚವೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನದಲ್ಲಿರುವ ಎಥೆನಾಲ್ ಪ್ರಮಾಣವನ್ನು ತಿಳಿಸುವ ಸೂಚನಾ ಫಲಕಗಳನ್ನೂ ಅಳವಡಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ದೇಶದ ವಾಹನಗಳ ಇಂಧನ ಟ್ಯಾಂಕ್‌ಗಳಿಗೆ ನಿಜವಾಗಿಯೂ ಯಾವ ಪ್ರಮಾಣದ ಎಥೆನಾಲ್ ಮಿಶ್ರಿತ ಪೆಟ್ರೋಲ್ ತುಂಬಿಸಲಾಗುತ್ತಿದೆ? ಶೇಕಡಾ 20ಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣ ಮಾಡುತ್ತಿರುವ ಕಂಪನಿಗಳ ವಿರುದ್ಧ ಯಾವಾಗ ಕ್ರಮ ಕೈಗೊಳ್ಳಲಾಗುತ್ತದೆ? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿಗೆ ಬಹಿರಂಗ ಚರ್ಚೆಗೆ ಆಹ್ವಾನ

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಹಿಂದೆ ನೀಡಿದ್ದ ಬಹಿರಂಗ ಚರ್ಚೆಯ ಸವಾಲನ್ನು ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ. ಎಥೆನಾಲ್ ಮಿಶ್ರಣದ ವಿಚಾರವನ್ನೂ ಚರ್ಚೆಯ ವಿಷಯವಾಗಿ ಸೇರಿಸಿಕೊಂಡು ಬಹಿರಂಗ ಚರ್ಚೆಗೆ ಬರುವಂತೆ ಆಹ್ವಾನಿಸಿದ್ದಾರೆ.

ಕರ್ನಾಟಕದಲ್ಲಿ ನಡೆಸಲಾದ ಪರೀಕ್ಷೆಗಳಲ್ಲಿ ಎಥೆನಾಲ್ ಪ್ರಮಾಣ ನಿಗದಿತ ಮಿತಿಯನ್ನು ಮೀರಿರುವುದಾಗಿ ವರದಿ ಉಲ್ಲೇಖಿಸಿ, ಸಂಬಂಧಪಟ್ಟ ತೈಲ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸಿದೆ ಎಂದು ವರದಿಯಾಗಿದೆ.