ದೀಪಾವಳಿ ಹಬ್ಬಕ್ಕೆ ಪ್ರಯಾಣಿಕರ ಅನುಕೂಲಕ್ಕಾಗಿ 123 ಸ್ಥಳಗಳಿಗೆ ಸಂಚರಿಸಲಿದೆ 908 ವಿಶೇಷ ಬಸ್ ಗಳು!

ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬೆಂಗಳೂರಿನಿಂದ ದಕ್ಷಿಣ ಭಾರತದ ವಿವಿಧ ರಾಜ್ಯಗಳ 123 ಸ್ಥಳಗಳಿಗೆ ಒಟ್ಟು 908 ವಿಶೇಷ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಿದೆ.

ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ಈ ವಿಶೇಷ ಬಸ್‌ಗಳ ಸೇವೆ ಲಭ್ಯವಿರಲಿದೆ. ಒಟ್ಟು 908 ಬಸ್‌ಗಳ ಪೈಕಿ ಶುಕ್ರವಾರ 549 ಬಸ್‌ಗಳು ಹಾಗೂ ಶನಿವಾರ 359 ಬಸ್‌ಗಳು ಸಂಚರಿಸಲಿವೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಸೇರಿದಂತೆ ನಗರದ ವಿವಿಧೆಡೆ ಪಿಕಪ್ ಪಾಯಿಂಟ್‌ಗಳು ಹಾಗೂ ಟಿಕೆಟ್ ಕಾಯ್ದಿರಿಸುವ ಕೌಂಟರ್‌ಗಳನ್ನು ತೆರೆಯಲಾಗಿದೆ.

ಕೆಎಸ್‌ಆರ್‌ಟಿಸಿ ಅಂಕಿಅಂಶಗಳ ಪ್ರಕಾರ, ಮಂಗಳೂರಿಗೆ 49, ದಾವಣಗೆರೆಗೆ 42, ಹುಬ್ಬಳ್ಳಿ ಮತ್ತು ಕುಂದಾಪುರಕ್ಕೆ ತಲಾ 35, ಬೆಳಗಾವಿಗೆ 29, ಶಿವಮೊಗ್ಗ ಮತ್ತು ತಿರುಪತಿಗೆ ತಲಾ 24, ಹೊಸಪೇಟೆಗೆ 23, ವಿಜಯಪುರ ಮತ್ತು ತಿರುಚಿರಾಪಳ್ಳಿಗೆ ತಲಾ 22, ಗೋಕರ್ಣ, ಸಾಗರ ಮತ್ತು ಮಧುರೈಗೆ ತಲಾ 21 ವಿಶೇಷ ಬಸ್‌ಗಳನ್ನು ಓಡಿಸಲಾಗುತ್ತಿದೆ.

ಶಿರಸಿಗೆ 17, ಉಡುಪಿ ಮತ್ತು ಬಳ್ಳಾರಿಗೆ ತಲಾ 16, ಕಲಬುರಗಿಗೆ 15, ಕುಂಭಕೋಣಂಗೆ 14, ಪುತ್ತೂರು ಮತ್ತು ತಿರುಕ್ಕೋಯಿಲೂರಿಗೆ ತಲಾ 13, ಚಿಕ್ಕಮಗಳೂರಿಗೆ 12, ಸೇಲಂಗೆ 11 ಹಾಗೂ ಹರಿಹರ, ಶೃಂಗೇರಿ ಮತ್ತು ತಿರುವಣ್ಣಾಮಲೈಗೆ ತಲಾ 10 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ಇದಲ್ಲದೆ ಮಡಿಕೇರಿ, ಯಲ್ಲಾಪುರ ಮತ್ತು ಚಿಕ್ಕೋಡಿಗೆ ತಲಾ 9; ಹಗರಿಬೊಮ್ಮನಹಳ್ಳಿ, ಹೊರನಾಡು, ಹೂವಿನಹಡಗಲಿ ಮತ್ತು ಕಲ್ಲಕುರಿಚಿಗೆ ತಲಾ 8; ಭಟ್ಕಳ, ಬೀದರ್, ಕಾರವಾರ, ಸಂಕೇಶ್ವರ, ಸುಳ್ಯ, ಜಮಖಂಡಿ, ಪುದುಚೇರಿ ಮತ್ತು ವಿಲ್ಲುಪುರಂಗೆ ತಲಾ 7 ವಿಶೇಷ ಬಸ್‌ಗಳು ಸಂಚರಿಸಲಿವೆ.

ನಿಪ್ಪಾಣಿ, ರಾಯಬಾಗ, ಅಥಣಿ ಮತ್ತು ಹುಮನಾಬಾದ್‌ಗೆ ತಲಾ 6 ಹಾಗೂ ಪುಣೆ, ಗದಗ, ಬಾಗಲಕೋಟೆ, ಬಿಳಗಿ, ಇಂಡಿ, ರಾಯಚೂರು, ರಾಯದುರ್ಗ, ಸೋಮವಾರಪೇಟೆ ಮತ್ತು ಆಂಧ್ರಪ್ರದೇಶದ ಪುತ್ತೂರಿಗೆ ತಲಾ 5 ಬಸ್‌ಗಳನ್ನು ನಿಯೋಜಿಸಲಾಗಿದೆ.

ಇನ್ನು ಚೆನ್ನೈ, ಪಣಜಿ, ಧಾರವಾಡ, ಕಡಲೂರು, ಕೊಪ್ಪಳ, ಮಂತ್ರಾಲಯ ಸೇರಿದಂತೆ ಹಲವು ಸ್ಥಳಗಳಿಗೆ ತಲಾ 4 ಬಸ್‌ಗಳ ಸೇವೆ ಕಲ್ಪಿಸಲಾಗಿದೆ.

ಬೆಂಗಳೂರಿನ ವಿವಿಧ ಪಿಕಪ್ ಪಾಯಿಂಟ್‌ಗಳಿಂದ ಈಗಾಗಲೇ 532 ಬಸ್‌ಗಳಿಗೆ ಟಿಕೆಟ್ ಕಾಯ್ದಿರಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಕೆಂಪೇಗೌಡ ಬಸ್ ನಿಲ್ದಾಣದ ನಾಲ್ಕು ಟರ್ಮಿನಲ್‌ಗಳು, ವಿಜಯನಗರ ಟಿಟಿಎಂಸಿ, ಯಶವಂತಪುರ ಟಿಟಿಎಂಸಿ, ಮಲ್ಲೇಶ್ವರಂ 18ನೇ ಕ್ರಾಸ್, ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ, ಯಲಹಂಕ ಸ್ಯಾಟಲೈಟ್ ಟೌನ್, ಬಸವೇಶ್ವರನಗರ ಟಿಟಿಎಂಸಿ, ಜಯನಗರ 4ನೇ ಬ್ಲಾಕ್, ಶಾಂತಿನಗರ ಬಸ್ ನಿಲ್ದಾಣ, ಐಟಿಐ ಮುಖ್ಯ ಗೇಟ್, ಚಿಕ್ಕಲಸಂದ್ರ ಮತ್ತು ನಾಯ್ಡು ಲೇಔಟ್‌ಗಳಲ್ಲಿ ಪ್ರಯಾಣಿಕರಿಗಾಗಿ ಪಿಕಪ್ ವ್ಯವಸ್ಥೆ ಕಲ್ಪಿಸಲಾಗಿದೆ.

ಹಬ್ಬದ ಪ್ರಯಾಣಕ್ಕೆ ಬಸ್ ದರ ಸರಾಸರಿ ಶೇ.37ರಷ್ಟು ಹೆಚ್ಚಳ

ದೀಪಾವಳಿ ಹಬ್ಬದ ಪ್ರಯಾಣಿಕರ ದಟ್ಟಣೆಯ ಪರಿಣಾಮವಾಗಿ ಬೆಂಗಳೂರಿನಿಂದ ರಾಜ್ಯದ ಪ್ರಮುಖ ಸ್ಥಳಗಳು ಹಾಗೂ ಹೊರರಾಜ್ಯಗಳಿಗೆ ಸಂಚರಿಸುವ ಬಸ್‌ಗಳ ಪ್ರಯಾಣ ದರದಲ್ಲಿ ಏರಿಕೆಯಾಗಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ನಾಲ್ಕು ವಿಭಾಗಗಳ ಬಸ್‌ಗಳ ದರ ಸರಾಸರಿ ಶೇ.37ರಷ್ಟು ಹೆಚ್ಚಳವಾಗಿದೆ.

ಮಂಗಳೂರಿಗೆ ಸಂಚರಿಸುವ ಬೆನ್ಜ್ ಮಲ್ಟಿ ಆಕ್ಸಲ್ ಸ್ಲೀಪರ್ ಬಸ್‌ನ ಸಾಮಾನ್ಯ ದಿನದ ಪ್ರಯಾಣ ದರ 873 ರೂ. ಇದ್ದರೆ, ಶುಕ್ರವಾರ 1,196 ರೂ.ಗೆ ಏರಿಕೆಯಾಗಿದೆ. ಎಸಿ ಸ್ಲೀಪರ್ ಬಸ್ ದರ 999 ರೂ.ನಿಂದ 1,529 ರೂ.ಗೆ ಹೆಚ್ಚಳವಾಗಿದೆ. ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರವೂ 579 ರೂ.ನಿಂದ 685 ರೂ.ಗೆ ಏರಿಕೆಯಾಗಿದೆ.

ಕೊಚ್ಚಿಗೆ ಸಂಚರಿಸುವ ಎಸಿ ಸ್ಲೀಪರ್ ಬಸ್‌ಗಳ ದರ 1,600 ರೂ.ನಿಂದ 2,600 ರೂ.ಗೆ ಹೆಚ್ಚಳವಾಗಿದ್ದು, ಎಸಿ ಸೀಟರ್/ಸ್ಲೀಪರ್ ಬಸ್‌ಗಳ ದರ 859 ರೂ.ನಿಂದ 1,299 ರೂ.ಗೆ ಏರಿಕೆಯಾಗಿದೆ.

ಅದೇ ರೀತಿ ಚೆನ್ನೈಗೆ ತೆರಳುವ ಬಸ್‌ಗಳ ಗರಿಷ್ಠ ಪ್ರಯಾಣ ದರ 1,797 ರೂ.ಗೆ ತಲುಪಿದೆ. ಸಾಮಾನ್ಯ ದಿನಗಳಲ್ಲಿ ಇದೇ ಬಸ್‌ಗಳ ದರ 1,300ರಿಂದ 1,400 ರೂ.ಗಳಷ್ಟಿರುತ್ತದೆ.

ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳುವುದರಿಂದ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅದರ ಪರಿಣಾಮ ಪ್ರಯಾಣ ದರದಲ್ಲಿಯೂ ಏರಿಕೆಯಾಗಿದೆ.