ನಮ್ಮ ಕೈಯ್ಯಲ್ಲೇನು ಇಲ್ಲ, ನನ್ನ ಮಗ ಮರಳಿ ಮನೆಗೆ ಬರುವಂತೆ ಮಾಡಿ: ಹರೀಶ್ ಬಂಗೇರ ತಾಯಿ ಕಣ್ಣಿರು

ಕುಂದಾಪುರ: ಕಳೆದ ವರ್ಷ ಮನೆಗೆ ಬಂದಿದ್ದ….ನನ್ನ ಮಗ ನಿರಪರಾಧಿ….ಎಲ್ಲಾ ಒಟ್ಟಾಗಿ ಸಹಾಯ ಮಾಡಿ…ನನ್ನ ಮಗ ವಾಪಾಸ್ ಮನೆಗೆ ಬರುವಂತೆ ಮಾಡಿ…..ಹೀಗೆ ಆ ಹಿರಿಯ ಜೀವ ಕೈಮುಗಿದು ಬೇಡಿಕೊಳ್ಳುತ್ತಿರುವುದು ಒಂದೆಡೆಯಾದರೆ ಪುಟ್ಟ ಕಂದಮ್ಮನನ್ನು ಎತ್ತುಕೊಂಡು ಕಣ್ಣಲ್ಲಿ ನೀರು ಹಾಕುತ್ತಾ ನನ್ನ ಪತಿಯದ್ದೇನು ತಪ್ಪಿಲ್ಲ ಎಂದು ಹೇಳುವ ಹೆಣ್ಮಗಳು ಮತ್ತೊಂದೆಡೆ.

ಸೌದಿ ರಾಜಕುಮಾರ ಹಾಗೂ ಮೆಕ್ಕಾದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಸೌದಿ ಪೊಲೀಸರಿಂದ ಬಂಧಿಯಾದ ಹರೀಶ್ ಬಂಗೇರ ಕುಟುಂಬ ಇದೀಗಾ ತಮ್ಮ ನಿರಪರಾಧಿ ಮಗನನ್ನು ವಾಪಾಸ್ ಕರೆದುತನ್ನಿ ನ್ಯಾಯಕೊಡಿಸಿ ಎಂದು ಅಂಗಲಾಚಿ ಕಣ್ಣೀರು ಹಾಕುತ್ತಿದೆ.

ಬಡತನದ ಕುಟುಂಬ.
ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಬೀಜಾಡಿ ಗೋಯಾಡಿಬೆಟ್ಟು ನಿವಾಸಿ ಸಿದ್ದು ಎನ್ನುವರ ನಾಲ್ವರು ಮಕ್ಕಳ ಪೈಕಿ ಹರೀಶ್ ಬಂಗೇರ ಒಬ್ಬರು. ದ್ವಿತೀಯ ಪಿಯು ಮುಗಿಸಿ ಐಟಿಐ ವಿದ್ಯಾಭ್ಯಾಸ ಪಡೆದ ಬಳಿಕ ಅಲ್ಲಿಲ್ಲಿ ಕೂಲಿಕೆಲಸ ಮಾಡಿಕೊಂಡಿದ್ದು ಕಳೆದ ಆರು ವರ್ಷಗಳ ಹಿಂದೆ ಸೌದಿಯ ಕಂಪೆನಿಯೊಂದರಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸಕ್ಕೆ ತೆರಳಿದ್ದರು. ಒಂಬತ್ತು ವರ್ಷಗಳ ಹಿಂದೆ ಕುಂಭಾಸಿಯ ಸುಮನಾ ಎನ್ನುವರನ್ನು ವಿವಾಹವಾಗಿದ್ದ ಇವರಿಗೆ ೨ ವರ್ಷ ಪ್ರಾಯದ ಹೆಣ್ಣುಮಗುವಿದೆ. ಚಿಕ್ಕದೊಂದು ಬಾಡಿಗೆ ಮನೆಯಲ್ಲಿ ಇವರ ವಾಸ. ವರ್ಷದ ಹಿಂದೆ ಅಂದರೆ ಜನವರಿ ತಿಂಗಳಿನಲ್ಲಿ ತಮ್ಮ ಮನೆ ದೇವರ ಹಬ್ಬಕ್ಕೆ ಬಂದಿದ್ದ ಹರೀಶ್ ಇದೀಗಾ ಸೌದಿ ಪೊಲೀಸರ ವಶದಲ್ಲಿದ್ದು ಇಡೀ ಕುಟುಂಬ ಕಂಗಾಲಾಗಿದೆ.

ನಡೆದಿದ್ದೇನು?
ಹರೀಶ್ ಬಂಗೇರ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಹತ್ಯೆಯ ಬೇರೊಬ್ಬರ ಪೋಸ್ಟ್ ಅನ್ನು ಹರೀಶ್ ಬಂಗೇರ ಎಸ್ ಎನ್ನುವ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಕೂಡಲೇ ಅಲ್ಲಿನ ಮುಸ್ಲಿಂ ಯುವಕರು ಹರೀಶ್ ಕೆಲಸ ನಿರ್ವಹಿಸುತ್ತಿರುವ ಕಚೇರಿಗೆ ತೆರಳಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಈ ವಿಚಾರವನ್ನು ಹರೀಸ್ ತಮ್ಮ ಪತ್ನಿಯ ಬಳಿ ಫೋನ್‌ನ ಮೂಲಕ ಹೇಳಿಕೊಂಡಿದ್ದು ಪತ್ನಿ ಕ್ಷಮೆ ಕೇಳುವಂತೆಯೂ ತಿಳಿಸಿದ್ದರು. ಅದಾದ ಬಳಿಕ ಘಟನೆಯ ಬಗ್ಗೆ ಹರೀಶ್ ಕ್ಷಮೆ ಕೇಳಿ ವೀಡಿಯೊವೊಂದನ್ನು ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾತಾಣದಲ್ಲಿ ಸಾಕಷ್ಟು ವೈರಲ್ ಕೂಡ ಆಗಿತ್ತು. ಕ್ಷಮೆ ಕೇಳಿದ ಬಳಿಕ ಡಿ.೧೯ರ ರಾತ್ರಿ ತನ್ನ ಫೇಸ್‌ಬುಕ್ ಖಾತೆಯನ್ನು ಡಿ-ಆಕ್ಟಿವೇಟ್ ಮಾಡಿದ್ದರು. ಆದರೆ ಮತ್ತೆ ಹರೀಶ್ ಬಂಗೇರ ಎನ್ನುವ ಫೇಸ್ ಬುಕ್ ಖಾತೆಯಿಂದ ಮೆಕ್ಕಾ ಕುರಿತು, ಸೌದಿ ದೊರೆ ಬಗ್ಗೆ ಅವಹೇಳನಕಾರಿ ಪೋಸ್ಟ್ ಅಪ್ಲೋಡ್ ಆಗಿದ್ದು ನಿಂದನಾತ್ಮಕ ಮತ್ತು ವಿವಾದಾತ್ಮಕ ಪೋಸ್ಟ್‌ಗಳು ಸೌದಿಯಾದ್ಯಂತ ಭಾರಿ ವೈರಲ್ ಆಗಿತ್ತು. ಈ ಬಳಿಕ ಕಂಪೆನಿ ಹರೀಶ್ ಅವರನ್ನು ಕಂಪೆನಿ ಕೆಲಸದಿಂದ ತಕ್ಷಣವೇ ವಜಾಗೊಳಿಸಿರುವುದಾಗಿ ಪ್ರಕಟಣೆ ನೀಡಿದ್ದು, ಸೌದಿ ರಾಝಕುಮಾರನ ಬಗ್ಗೆ ಅವಹೇಳನಕಾರಿ ಪೋಸ್ಟ್ ಅಪ್ಲೋಡ್ ಮಾಡಿದ ಆರೋಪದಲ್ಲಿ ಸೌದಿ ಪೊಲೀಸರು ಹರೀಶನನ್ನು ಬಂಧಿಸಿದ್ದಾರೆ.

ಫೇಕ್ ಐಡಿ ಮೂಲಕ ಬಂಧನಕ್ಕೆ ಹುನ್ನಾರ?
ತನ್ನ ಫೇಸ್ ಬುಕ್ ಐಡಿ ನಿಷ್ಕ್ರೀಯಗೊಳಿಸಿದ ಮೇಲೂ ಹರೀಶ್ ಫೋಟೋ ಉಪಯೋಗಿಸಿಕೊಂಡು ಹರೀಶ್ ಬಂಗೇರ ಎನ್ನುವ ಹೆಸರಲ್ಲಿ ಮತ್ತೊಂದು ಖಾತೆ ತೆರೆಯಲಾಗಿತ್ತು. ಇದರ ಬಗ್ಗೆಯೂ ಪತ್ನಿ ಸುಮನಾ ಹರೀಶ್ ಗಮನಕ್ಕೆ ತಂದಿದ್ದರು. ಮಾರನೇ ದಿನ ಆ ಖಾತೆಯಲ್ಲಿ ಸೌದಿ ದೊರೆಯ ಬಗ್ಗೆ ಮೆಕ್ಕಾದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಲಾಗಿತ್ತು. ಕಿಡಿಗೇಡಿಗಳು ಹರೀಶ್ ಬಂಗೇರ ಅವರ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಠಿಸಿ ಆ ಖಾತೆಯಲ್ಲಿ ಹಿಂದೂತ್ವದ ಬಗೆಗಿನ ಬರಹಗಳು ಹಾಗೂ ಸೌದಿ ದೊರೆ ಮತ್ತು ಮೆಕ್ಕಾದ ವಿರುದ್ದ ಅವಹೇಳನಕಾರಿ ಪೋಸ್ಟ್‌ಗಳನ್ನು ಅಪ್ಲೋಡ್ ಮಾಡಿ ಹರಿಯಬಿಟ್ಟಿದ್ದಾರೆ ಎಂದು ಹರೀಶ್ ಪತ್ನಿ ನಡೆದ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸರಿಗೂ ಸುಮನಾ ದೂರು ನೀಡಿದ್ದು ಫೇಕ್ ಐಡಿ ಬಗ್ಗೆ ಕ್ರಮಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದಾರೆ. ಪೊಲಿಸರು ಈಗಾಗಾಲೇ ಫೇಕ್ ಐಡಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಈ ನಕಲಿ ಖಾತೆ ಕಾಸರಗೋಡಿನಲ್ಲಿ ಸೃಷ್ಠಿಸಲಾಗಿದೆ ಎನ್ನುವ ಮಾಹಿತಿ ಸೆನ್ ಅಧೀಕಾರಿಗಳು ಹರೀಶ್ ಪತ್ನಿ ಸುಮನ ಅವರಿಗೆ ತಿಳಿಸಿದ್ದಾರೆ.

ಒಟ್ಟಿನಲ್ಲಿ ಹರೀಶ್ ಬಂಗೇರ ಅವರ ಇಡೀ ಕುಟುಂಬ ಕಂಗಾಲಾಗಿದ್ದು ಸೋಮವಾರ ಬೆಳಿಗ್ಗೆ ಅವರ ನಿವಾಸಕ್ಕೆ ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ ಅಂಕದಕಟ್ಟೆ, ಕಾಂಗ್ರೆಸ್ ಹಿರಿಯ ಮುಖಂಡ ಅಶೋಕ್ ಪೂಜಾರಿ ಬೀಜಾಡಿ, ಬೀಜಾಡಿ ಗ್ರಾ.ಪಂ ಸದಸ್ಯ ಪ್ರಕಾಶ್ ಬೀಜಾಡಿ ಮೊದಲಾದವರು ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ.