ರಾಷ್ಟ್ರೀಯ ಟೈಲರಿಂಗ್ ಸಮ್ಮೇಳನದಲ್ಲಿ ಉಡುಪಿಯ 90ಕ್ಕೂ ಅಧಿಕ ಕಲಾವಿದರ ಸಾಧನೆ

ಒಂದೂವರೆ ಗಂಟೆಯಲ್ಲಿ ಕೈಹೊಲಿಗೆಯಿಂದ ಬೇಬಿ ಫ್ರಾಕ್ ಹೊಲಿದು ಕೌಶಲ್ಯ ಪ್ರದರ್ಶನ

ಉಡುಪಿ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ 2ನೇ ರಾಷ್ಟ್ರೀಯ ಟೈಲರಿಂಗ್ ಸಮ್ಮೇಳನದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸುಮಾರು 2,000 ಮಂದಿ ಟೈಲರಿಂಗ್ ಕಲಾವಿದರು ಹಾಗೂ ತರಬೇತುದಾರರು ಭಾಗವಹಿಸಿದ್ದರು. ಉಡುಪಿ ಜಿಲ್ಲೆಯಿಂದ 90ಕ್ಕೂ ಅಧಿಕ ಮಂದಿ ಭಾಗವಹಿಸಿ ತಮ್ಮ ಹೊಲಿಗೆ ಕಲೆಯ ಕೌಶಲ್ಯವನ್ನು ಪ್ರದರ್ಶಿಸಿ ಜಿಲ್ಲೆಗೆ ಹೆಮ್ಮೆ ತಂದರು.

ಸಮ್ಮೇಳನದಲ್ಲಿ ಭಾಗವಹಿಸಿದ ಕಲಾವಿದರಿಗೆ ಒಂದೂವರೆ ಗಂಟೆಯ ಅವಧಿಯಲ್ಲಿ ಕೈಹೊಲಿಗೆಯ ಮೂಲಕ 2ರಿಂದ 4 ವರ್ಷದ ಮಗುವಿಗೆ ಬೇಕಾದ ಬೇಬಿ ಫ್ರಾಕ್ ಹೊಲಿಯುವ ಸವಾಲನ್ನು ನೀಡಲಾಗಿತ್ತು. ಉಡುಪಿ ಜಿಲ್ಲೆಯಿಂದ ಭಾಗವಹಿಸಿದ ಎಲ್ಲ ಕಲಾವಿದರು ಈ ಸವಾಲನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ತಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ಸಾಬೀತುಪಡಿಸಿದರು.

ಈ ಸಾಧನೆಗಾಗಿ ಭಾಗವಹಿಸಿದ ಎಲ್ಲರಿಗೂ ಆಸ್ಕರ್ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ಪ್ರಮಾಣಪತ್ರ ಹಾಗೂ ಪದಕಗಳನ್ನು ನೀಡಲಾಯಿತು. ಜೊತೆಗೆ ಇಂಡಿಯನ್ ಟೈಲರಿಂಗ್ ಕೌನ್ಸಿಲ್ (ITC) ಸದಸ್ಯತ್ವ ಪ್ರಮಾಣಪತ್ರವನ್ನೂ ವಿತರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಅವರು ಮಾತನಾಡಿ, “ಜೀವನದಲ್ಲಿ ಶಿಕ್ಷಣ ಅತ್ಯಂತ ಮುಖ್ಯ. ಲಿಂಗಭೇದವಿಲ್ಲದೆ ಎಲ್ಲರಿಗೂ ಶಿಕ್ಷಣ ಮತ್ತು ಕೌಶಲ್ಯ ತರಬೇತಿ ನೀಡಬೇಕು. ಪ್ರತಿಯೊಬ್ಬರೂ ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳುವಂತಾಗಬೇಕು. ಶಿಕ್ಷಣ ಮತ್ತು ಕೌಶಲ್ಯಗಳು ವ್ಯಕ್ತಿಯಲ್ಲಿ ಆತ್ಮವಿಶ್ವಾಸವನ್ನು ಬೆಳೆಸುತ್ತವೆ. ಜೀವನದಲ್ಲಿ ಎಂತಹ ಕಷ್ಟದ ಪರಿಸ್ಥಿತಿ ಎದುರಾದರೂ ಧೈರ್ಯದಿಂದ ಮುನ್ನಡೆಯಲು ಸಹಕಾರಿಯಾಗುತ್ತವೆ” ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಉಡುಪಿ ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ರಮ್ಯಾ ಎ.ಸಿ. ಅವರು ತಮ್ಮ ಟೈಲರಿಂಗ್ ಕ್ಷೇತ್ರದ ಸಾಧನೆಗಾಗಿ ಕಲಾಶ್ರೀ ಪ್ರಶಸ್ತಿಯನ್ನು ಪಡೆದುಕೊಂಡರು.

ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿದ್ಧಿ ಕ್ರಿಯೇಟಿವ್ ಸ್ಕಿಲ್ ಅಕಾಡೆಮಿಯ ಶಿಕ್ಷಕಿಯೊಬ್ಬರು ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಪಡೆದುಕೊಂಡರು. ಇದೇ ಸಂದರ್ಭದಲ್ಲಿ ವಿವಿಧ ಸಂಸ್ಥೆಗಳಿಂದ ಭಾಗವಹಿಸಿದ್ದ ಮೂವರು ಶಿಕ್ಷಕಿಯರಿಗೂ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಮ್ಯಾ ಎ.ಸಿ. ಅವರು ಉಡುಪಿಯಲ್ಲಿ ಸಿದ್ಧಿ ಕ್ರಿಯೇಟಿವ್ ಸ್ಕಿಲ್ ಅಕಾಡೆಮಿಯನ್ನು ನಡೆಸುತ್ತಿದ್ದು, ಅಕಾಡೆಮಿಯಲ್ಲಿ ಆರಿ ವರ್ಕ್, ಸೀರೆ ಕುಚ್ಚು, ಟೈಲರಿಂಗ್, ಫ್ಯಾಬ್ರಿಕ್ ಪೇಂಟಿಂಗ್, ಕ್ರೋಶೆ ಮತ್ತು ಎಂಬ್ರಾಯ್ಡರಿ ಸೇರಿದಂತೆ ವಿವಿಧ ಕೌಶಲ್ಯ ತರಬೇತಿಗಳನ್ನು ನೀಡುತ್ತಿದ್ದಾರೆ.

ಉಡುಪಿ ಜಿಲ್ಲೆಯ ಟೈಲರಿಂಗ್ ಕಲಾವಿದರ ಸಾಧನೆ, ಶಿಕ್ಷಕಿಯರಿಗೆ ದೊರೆತ ಪ್ರಶಸ್ತಿಗಳು ಹಾಗೂ ರಮ್ಯಾ ಎ.ಸಿ. ಅವರಿಗೆ ಲಭಿಸಿದ ಕಲಾಶ್ರೀ ಪ್ರಶಸ್ತಿಯಿಂದ ಸಮ್ಮೇಳನವು ವಿಶೇಷ ಗಮನ ಸೆಳೆಯಿತು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.