ಇರಾನ್‌ ಖೇಷ್ಮ್ ದ್ವೀಪದ ಮೇಲೆ ಅಮೆರಿಕ ದಾಳಿ – ಕಚ್ಚಾ ತೈಲ ಬೆಲೆ ಏರಿಕೆ

ವಾಷಿಂಗ್ಟನ್‌: ಮಧ್ಯಪ್ರಾಚ್ಯದಲ್ಲಿ ಯುದ್ಧ ಕೊನೆಗೊಳಿಸಲು ರಾಜತಾಂತ್ರಿಕ ಮಾತುಕತೆಗಳು ಮುಂದುವರಿದಿರುವ ನಡುವೆಯೇ, ಇರಾನ್‌ನ ಖೇಷ್ಮ್ ದ್ವೀಪದ(Iran’s Qeshm Island) ಮೇಲೆ ಅಮೆರಿಕ ಪಡೆಗಳು ದಾಳಿ(US Strike) ನಡೆಸಿವೆ ಎಂಬ ವರದಿಗಳ ಬೆನ್ನಲ್ಲೇ ಮಂಗಳವಾರ ಏಷ್ಯನ್ ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ ಕಚ್ಚಾ ತೈಲ ದರದಲ್ಲಿ(Oil Prices) ಮತ್ತೆ ಏರಿಕೆ ಕಂಡುಬಂದಿದೆ.

ಅಮೆರಿಕದ ಪಡೆಗಳು ಇರಾನ್‌ನ ಖೇಷ್ಮ್ ದ್ವೀಪದ ಮೇಲೆ ದಾಳಿ ನಡೆಸಿವೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಅಮೆರಿಕ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳ ಮೇಲೆ ಇರಾನ್ ದಾಳಿ ನಡೆಸುವುದನ್ನು ತಡೆಯಲು ರಕ್ಷಣಾತ್ಮಕ ಕ್ರಮವಾಗಿ ಈ ದಾಳಿ ನಡೆಸಲಾಗಿದೆ ಎಂದು ಕೆಲವು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

ಜಾಗತಿಕ ಇಂಧನ ಪೂರೈಕೆಯಲ್ಲಿ ಹಾರ್ಮುಜ್ ಜಲಸಂಧಿ(Strait of Hormuz) ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದು, ಫೆಬ್ರವರಿ ಅಂತ್ಯದಲ್ಲಿ ಸಂಘರ್ಷ ಆರಂಭವಾಗುವ ಮುನ್ನ ವಿಶ್ವದ ಐದನೇ ಒಂದು ಭಾಗದಷ್ಟು ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಈ ಮಾರ್ಗದಲ್ಲೇ ಸಾಗಣೆಯಾಗುತ್ತಿತ್ತು. ಸಂಘರ್ಷದ ನಂತರ ಇಲ್ಲಿ ಹಡಗು ಸಂಚಾರ ಗಣನೀಯವಾಗಿ ಇಳಿಮುಖವಾಗಿದ್ದು, ಇಂಧನ ಪೂರೈಕೆಯ ಆತಂಕ ಹೆಚ್ಚಾಗಿದೆ.

ದಾಳಿಯ ಬೆನ್ನಲ್ಲೇ ಬ್ರೆಂಟ್ ಕಚ್ಚಾ ತೈಲದ ಭವಿಷ್ಯದ ಬೆಲೆ ಬ್ಯಾರೆಲ್‌ಗೆ ಶೇ. 0.5) ಏರಿಕೆಯಾಗಿ 105.25 ಡಾಲರ್‌ ತಲುಪಿದ್ದರೆ, ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ (WTI) ಕಚ್ಚಾ ತೈಲದ ಬೆಲೆ ಶೇ. 0.5 ಏರಿಕೆಯಾಗಿ 96.93 ಡಾಲರ್‌ ತಲುಪಿದೆ. ಯುದ್ಧ ನಿಲ್ಲುವ ಲಕ್ಷಣಗಳು ಗೋಚರಿಸಿದ ಹಿನ್ನೆಲೆಯಲ್ಲಿ ಹಿಂದಿನ ದಿನವಷ್ಟೇ ಬ್ರೆಂಟ್ ತೈಲ ದರ ಶೇ. 7.63 (8.66 ಡಾಲರ್‌) ಕುಸಿದು, ಬ್ಯಾರೆಲ್‌ಗೆ 104.77 ಡಾಲರ್‌ ತಲುಪಿತ್ತು. ಆದರೆ, ತಾಜಾ ಸೇನಾ ಕಾರ್ಯಾಚರಣೆಯ ವರದಿಗಳು ಹೂಡಿಕೆದಾರರಲ್ಲಿ ಮತ್ತೆ ಆತಂಕ ಮೂಡಿಸಿವೆ.

ಸೇನಾ ಸಂಘರ್ಷದ ನಡುವೆಯೂ ರಾಜತಾಂತ್ರಿಕ ಪರಿಹಾರಕ್ಕೆ ಬಾಗಿಲು ತೆರೆದಿದೆ ಎಂದು ಎರಡೂ ದೇಶಗಳು ಸೂಚಿಸಿವೆ. ಕತಾರ್ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆ ಯಾವುದೇ ನಿರ್ಧಾರಕ್ಕೆ ಬಾರದೆ ಮುಕ್ತಾಯಗೊಂಡಿದ್ದರೂ, ಪರಿಷ್ಕೃತ ಪ್ರಸ್ತಾಪಗಳನ್ನು ಮುಂದಿಡಲಾಗಿದ್ದು, ವಾಷಿಂಗ್ಟನ್ ಜತೆಗಿನ ಸಂಪರ್ಕ ಮುಂದುವರಿದಿದೆ ಎಂದು ಇರಾನ್ ತಿಳಿಸಿದೆ.

ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟೆಹ್ರಾನ್ ಜತೆಗೆ ಒಪ್ಪಂದ ಸಾಧ್ಯವಿದೆ ಎಂದು ಹೇಳಿದ್ದು, ಹೊಸ ದಾಳಿಗಳ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಯುದ್ಧ ನಿಲ್ಲಿಸುವ ಮಾತುಕತೆಗಳನ್ನು ಮುಂದುವರಿಸಲು ಪರಮೋಚ್ಚ ನಾಯಕ ಅಯಾತುಲ್ಲಾ ಮೊಜ್ತಬಾ ಖಮೇನಿ ಸರ್ಕಾರಕ್ಕೆ ನಿರ್ದಿಷ್ಟ ಅಧಿಕಾರ ನೀಡಿದ್ದಾರೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಸ್ಪಷ್ಟಪಡಿಸಿದ್ದಾರೆ.

ರಾಜತಾಂತ್ರಿಕ ಯತ್ನಗಳು ಒಂದೆಡೆಯಾದರೆ, ಹೊಸ ಸೇನಾ ದಾಳಿಗಳ ಭೀತಿ ಮತ್ತೊಂದೆಡೆ ತೈಲ ಮಾರುಕಟ್ಟೆಯಲ್ಲಿ ತೀವ್ರ ಏರಿಳಿತವನ್ನುಂಟುಮಾಡಿದೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ ಅಕ್ಟೋಬರ್ ಅಂತ್ಯದಲ್ಲಿ ಬ್ರೆಂಟ್ ತೈಲ ದರ ಆರು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಇದಲ್ಲದೆ, ಅಮೆರಿಕದಲ್ಲಿ ಗ್ಯಾಸೋಲಿನ್ ಬೆಲೆಗಳು ನಿರಂತರವಾಗಿ ಏರುತ್ತಿರುವುದು ಡೊನಾಲ್ಡ್ ಟ್ರಂಪ್ ಆಡಳಿತದ ಮೇಲೆ ಯುದ್ಧವನ್ನು ಶೀಘ್ರವಾಗಿ ಕೊನೆಗೊಳಿಸಲು ತೀವ್ರ ಒತ್ತಡ ಹೇರಿದೆ.

ಇದೇ ವೇಳೆ, ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ನವೆಂಬರ್ 10 ಮತ್ತು 11 ರಂದು ಅಬುಧಾಬಿಯಲ್ಲಿ ರಷ್ಯಾ ಮತ್ತು ಉಕ್ರೇನ್ ನಿಯೋಗಗಳ ನಡುವೆ ಶಾಂತಿ ಸಭೆ ನಡೆಸಲು ವಾಷಿಂಗ್ಟನ್ ಸಿದ್ಧತೆ ನಡೆಸಿದೆ. ಈ ಸಭೆಯಲ್ಲಿ ಯುದ್ಧ ನಿಲ್ಲಿಸುವುದು ಮತ್ತು ಯುದ್ಧಾನಂತರದ ಭದ್ರತಾ ವ್ಯವಸ್ಥೆಗಳ ಕುರಿತು ಮಹತ್ವದ ಚರ್ಚೆಗಳು ನಡೆಯಲಿವೆ.