ಬೆಂಗಳೂರು: ಚಂಡಮಾರುತ ‘ಮುರಸು’ ಪ್ರಭಾವದಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನವೆಂಬರ್ 6ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ರಾಜ್ಯದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಚಂಡಮಾರುತದ ಪರಿಣಾಮ ಸುರಿಯುತ್ತಿರುವ ಮಳೆಯಿಂದ ರಾಜ್ಯದಲ್ಲಿ ಈವರೆಗೆ ಕಂಡುಬಂದಿದ್ದ ಮಳೆಯ ಕೊರತೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿಯ ಹಿರಿಯ ವಿಜ್ಞಾನಿ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.















