ಮಂಗಳೂರಿನಿಂದ 100 ಕಿ.ಮೀ ದೂರ ಸಮುದ್ರಕ್ಕೆ ಬಿದ್ದ ಮೀನುಗಾರನ ರಕ್ಷಣೆ: ಕೋಸ್ಟ್ ಗಾರ್ಡ್‌ನಿಂದ ತ್ವರಿತ ಕಾರ್ಯಾಚರಣೆ

ಮಂಗಳೂರು: ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದ ಮೀನುಗಾರನನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಭಾನುವಾರ ಮಧ್ಯರಾತ್ರಿ ಮಂಗಳೂರಿನಿಂದ ಸುಮಾರು 54 ನಾಟಿಕಲ್ ಮೈಲಿ (100 ಕಿ.ಮೀ.) ದೂರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ‘ಐಎಫ್‌ಬಿ ಶಿವ ಸಾಗರ್’ ಎಂಬ ಮೀನುಗಾರಿಕಾ ದೋಣಿಯಿಂದ ವಿಹೆಚ್‌ಎಫ್ (VHF) ಮೂಲಕ ತುರ್ತು ಕರೆ ಬಂದಿತ್ತು. ದೋಣಿಯಲ್ಲಿ ಬಲೆ ಎಳೆಯುತ್ತಿದ್ದ ಸಂದರ್ಭದಲ್ಲಿ ಮೀನುಗಾರನೊಬ್ಬ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದಿದ್ದನು. ದೋಣಿಯಲ್ಲಿದ್ದ ಇತರ ಸಿಬ್ಬಂದಿ ತಕ್ಷಣವೇ ಆತನನ್ನು ನೀರಿನಿಂದ ಮೇಲಕ್ಕೆತ್ತಿದ್ದರು. ಆದರೆ, ಮೀನುಗಾರನಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯವಿತ್ತು.

ತುರ್ತು ಸಂದೇಶ ಸ್ವೀಕರಿಸಿದ ಭಾರತೀಯ ಕೋಸ್ಟ್ ಗಾರ್ಡ್ ಜಿಲ್ಲಾ ಪ್ರಧಾನ ಕಚೇರಿ-3 ತಕ್ಷಣ ಕಾರ್ಯಪ್ರವೃತ್ತವಾಗಿ ರಕ್ಷಣಾ ಕಾರ್ಯಾಚರಣೆಗಾಗಿ ‘ಐಸಿಜಿಎಸ್ ಸಿ-448’ ಹಡಗನ್ನು ನಿಯೋಜಿಸಿತು. ದಟ್ಟ ಕತ್ತಲೆ ಹಾಗೂ ಸಮುದ್ರದ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಕೋಸ್ಟ್ ಗಾರ್ಡ್ ಸಿಬ್ಬಂದಿ ಮೀನುಗಾರಿಕಾ ದೋಣಿಯನ್ನು ಪತ್ತೆಹಚ್ಚಿ, ಸಂತ್ರಸ್ತ ಮೀನುಗಾರನನ್ನು ಸುರಕ್ಷಿತವಾಗಿ ರಕ್ಷಿಸಿದರು.

ಬಳಿಕ ಮೀನುಗಾರನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ನವಮಂಗಳೂರು ಬಂದರು ಪ್ರಾಧಿಕಾರದ (ಎನ್‌ಎಂಪಿಎ) ಜೆಟ್ಟಿಗೆ ಕರೆತರಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಕೋಸ್ಟ್ ಗಾರ್ಡ್ ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ತ್ವರಿತ ಕಾರ್ಯಾಚರಣೆಯಿಂದ ಮೀನುಗಾರನಿಗೆ ಸಕಾಲದಲ್ಲಿ ವೈದ್ಯಕೀಯ ನೆರವು ದೊರೆತಿದೆ.