ಗೂಗಲ್ ಜೆಮಿನಿಯಲ್ಲಿ ಹೊಸ ‘ಅವತಾರ’ ಫೀಚರ್: ನಿಮ್ಮದೇ ಹೋಲಿಕೆಯ ಎಐ ಅವತಾರ್ ರಚಿಸುವ ಒಂದು ಅದ್ಬುತ ಫೀಚರ್ ಇದು!

ನವದೆಹಲಿ: ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸುತ್ತಿರುವ ಜಾಗತಿಕ ಸರ್ಚ್ ಇಂಜಿನ್ ದೈತ್ಯ ಗೂಗಲ್, ತನ್ನ ಜೆಮಿನಿ (Gemini) ಎಐ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ಈ ಮೂಲಕ ಬಳಕೆದಾರರು ತಮ್ಮ ಮುಖದ ಹೋಲಿಕೆ ಹಾಗೂ ಧ್ವನಿಯನ್ನು ಹೊಂದಿರುವ ವೈಯಕ್ತಿಕ ಡಿಜಿಟಲ್ ಅವತಾರ್‌ಗಳನ್ನು ರಚಿಸಿಕೊಳ್ಳಬಹುದಾಗಿದೆ.

ಈ ಹೊಸ ಫೀಚರ್‌ನ ವಿಶೇಷತೆಯೆಂದರೆ, ಸೃಷ್ಟಿಸಿದ ಎಐ ಅವತಾರ್‌ಗಳನ್ನು ಸ್ನೇಹಿತರು, ಕುಟುಂಬದ ಸದಸ್ಯರು ಹಾಗೂ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಬಹುದು. ಅನುಮತಿ ಪಡೆದ ಇತರ ಬಳಕೆದಾರರು ಕೂಡ ತಮ್ಮ ಕ್ರಿಯೇಟಿವ್ ಚಿತ್ರಗಳು ಮತ್ತು ವಿಡಿಯೋಗಳಲ್ಲಿ ನಿಮ್ಮ ಡಿಜಿಟಲ್ ಹೋಲಿಕೆಯನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

ಏನಿದು ಜೆಮಿನಿ ಪರ್ಸನಲ್ ಅವತಾರ್?

ಜೆಮಿನಿ ಪರ್ಸನಲ್ ಅವತಾರ್ (Gemini Personal Avatar) ಎಂಬುದು ಬಳಕೆದಾರರ ಮುಖದ ಚಿತ್ರಣ ಹಾಗೂ ಧ್ವನಿಯ ರೆಕಾರ್ಡಿಂಗ್ ಆಧರಿಸಿ ಸೃಷ್ಟಿಯಾಗುವ ಡಿಜಿಟಲ್ ರೂಪವಾಗಿದೆ. ಇದನ್ನು ಒಮ್ಮೆ ಸಿದ್ಧಪಡಿಸಿಕೊಂಡ ಬಳಿಕ ತಮ್ಮದೇ ಹೋಲಿಕೆಯನ್ನು ಬಳಸಿಕೊಂಡು ಹೊಸ ಚಿತ್ರಗಳು ಮತ್ತು ವಿಡಿಯೋಗಳನ್ನು ರಚಿಸಬಹುದು.

ಈ ಪ್ರಕ್ರಿಯೆಯಲ್ಲಿ ಚಿತ್ರಗಳ ರಚನೆಗೆ ‘ನ್ಯಾನೋ ಬನಾನಾ’ (Nano Banana) ಹಾಗೂ ವಿಡಿಯೋ ಉತ್ಪಾದನೆಗೆ ‘ಜೆಮಿನಿ ಓಮ್ನಿ’ (Gemini Omni) ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ ಎಂದು ವರದಿಯಾಗಿದೆ.

ಸದ್ಯಕ್ಕೆ 18 ವರ್ಷ ಮೇಲ್ಪಟ್ಟ ವೈಯಕ್ತಿಕ ಗೂಗಲ್ ಖಾತೆ ಹೊಂದಿರುವ ಬಳಕೆದಾರರಿಗೆ ಇಂಗ್ಲಿಷ್ ಭಾಷೆಯಲ್ಲಿ ಈ ಸೌಲಭ್ಯ ಲಭ್ಯವಿದೆ. ಆದರೆ ಯುಕೆ, ಯುರೋಪಿಯನ್ ಆರ್ಥಿಕ ವಲಯ ಹಾಗೂ ಸ್ವಿಟ್ಜರ್ಲೆಂಡ್‌ನಲ್ಲಿ ಈ ವೈಶಿಷ್ಟ್ಯವನ್ನು ಸದ್ಯಕ್ಕೆ ನಿರ್ಬಂಧಿಸಲಾಗಿದೆ.

ನಿಮ್ಮದೇ ಎಐ ಅವತಾರ್ ರಚಿಸುವುದು ಹೇಗೆ?

ಮೊಬೈಲ್ ಅಥವಾ ಟ್ಯಾಬ್ಲೆಟ್ ಬಳಸಿ ಕೆಲವೇ ಹಂತಗಳಲ್ಲಿ ವೈಯಕ್ತಿಕ ಎಐ ಅವತಾರ್ ಸೃಷ್ಟಿಸಬಹುದು.

  1. ಮೊದಲು ನಿಮ್ಮ ಮೊಬೈಲ್‌ನಲ್ಲಿ ಜೆಮಿನಿ ಆ್ಯಪ್ ಅಥವಾ ವೆಬ್‌ಸೈಟ್ ತೆರೆಯಿರಿ.
  2. ಸೆಟ್ಟಿಂಗ್ಸ್ ಅಥವಾ ‘Personal Avatars’ ವಿಭಾಗಕ್ಕೆ ಭೇಟಿ ನೀಡಿ.
  3. ಹೊಸ ಅವತಾರ್ ರಚಿಸುವ ಆಯ್ಕೆಯನ್ನು ಆರಿಸಿಕೊಳ್ಳಿ.
  4. ಪರದೆಯ ಮೇಲೆ ಕಾಣಿಸುವ ಕ್ಯೂಆರ್ ಕೋಡ್ (QR Code) ಅನ್ನು ನಿಮ್ಮ ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿ.
  5. ಉತ್ತಮ ಬೆಳಕಿರುವ ಹಾಗೂ ಗದ್ದಲವಿಲ್ಲದ ಸ್ಥಳದಲ್ಲಿ ನಿಂತು, ಪರದೆಯ ಮೇಲಿನ ಸೂಚನೆಗಳಂತೆ ವಿವಿಧ ಕೋನಗಳಲ್ಲಿ ನಿಮ್ಮ ಮುಖದ ಹಾವಭಾವಗಳನ್ನು ರೆಕಾರ್ಡ್ ಮಾಡಿ.
  6. ನಂತರ ಸೂಚನೆ ಬಂದಾಗ ನಿಮ್ಮ ಧ್ವನಿಯನ್ನು ಸ್ಪಷ್ಟವಾಗಿ ರೆಕಾರ್ಡ್ ಮಾಡಿ.
  7. ರೆಕಾರ್ಡಿಂಗ್ ಪೂರ್ಣಗೊಂಡ ಬಳಿಕ ಅದನ್ನು ಸಬ್ಮಿಟ್ ಮಾಡಿ.
  8. ಜೆಮಿನಿ ನಿಮ್ಮ ಮುಖದ ದೃಶ್ಯಾವಳಿ ಮತ್ತು ಧ್ವನಿಯನ್ನು ಪ್ರಕ್ರಿಯೆಗೊಳಿಸಿ ವೈಯಕ್ತಿಕ ಎಐ ಅವತಾರ್ ಸಿದ್ಧಪಡಿಸುತ್ತದೆ.

ಅವತಾರ್ ಹಂಚಿಕೊಳ್ಳುವುದು ಮತ್ತು ಅಳಿಸುವುದು ಹೇಗೆ?

ಬಳಕೆದಾರರು ತಮ್ಮ ಎಐ ಅವತಾರ್ ಅನ್ನು ಇತರರೊಂದಿಗೆ ಹಂಚಿಕೊಳ್ಳಲು ಅವರ ಜಿಮೇಲ್ (Gmail) ವಿಳಾಸಕ್ಕೆ ಆಹ್ವಾನ ಕಳುಹಿಸಬಹುದು. ಆಹ್ವಾನ ಸ್ವೀಕರಿಸಿದ ಬಳಿಕವಷ್ಟೇ ಸಂಬಂಧಪಟ್ಟವರು ನಿಮ್ಮ ಡಿಜಿಟಲ್ ಅವತಾರ್ ಅನ್ನು ಬಳಸಲು ಸಾಧ್ಯವಾಗುತ್ತದೆ.

ಬಳಕೆದಾರರ ಸುರಕ್ಷತೆ ಮತ್ತು ಗೌಪ್ಯತೆಗೆ ಆದ್ಯತೆ ನೀಡುವ ಉದ್ದೇಶದಿಂದ ಅವತಾರ್ ಮೇಲಿನ ನಿಯಂತ್ರಣವನ್ನೂ ಗೂಗಲ್ ಒದಗಿಸಿದೆ. ಯಾವುದೇ ಸಂದರ್ಭದಲ್ಲಿ ಅವತಾರ್ ಬೇಡವೆನಿಸಿದರೆ ಗೂಗಲ್ ಖಾತೆಯ ಸೆಟ್ಟಿಂಗ್ಸ್ ಮೂಲಕ ಅದನ್ನು ಶಾಶ್ವತವಾಗಿ ಅಳಿಸಬಹುದು.

ಆದರೆ ಈ ವೈಶಿಷ್ಟ್ಯದ ಮೂಲಕ ವಿಡಿಯೋಗಳನ್ನು ರಚಿಸಲು ಬಳಕೆದಾರರು ಗೂಗಲ್ ಎಐ ಪ್ಲಾನ್ ಹೊಂದಿರುವುದು ಕಡ್ಡಾಯವಾಗಿದೆ. ಹೀಗಾಗಿ ತಮ್ಮದೇ ಡಿಜಿಟಲ್ ರೂಪವನ್ನು ಸೃಷ್ಟಿಸಿ, ಅದನ್ನು ಬಳಸಿಕೊಂಡು ವಿಭಿನ್ನ ಚಿತ್ರ ಹಾಗೂ ವಿಡಿಯೋಗಳನ್ನು ತಯಾರಿಸಲು ಬಯಸುವವರಿಗೆ ಜೆಮಿನಿಯ ಈ ಹೊಸ ಪ್ರಯೋಗ ಕುತೂಹಲ ಮೂಡಿಸಿದೆ.