ತ್ರಿಶಾ ಕ್ಲಾಸಸ್ .ಸಿ.ಎ. ಇಂಟರ್ಮೀಡಿಯೇಟ್ ಸಾಧಕರಿಗೆ ತ್ರಿಶಾ ಸನ್ಮಾನ

ಕಟಪಾಡಿ: ತ್ರಿಶಾ ಕ್ಲಾಸಸ್ ವತಿಯಿಂದ ಸಿಎ (CA) ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಸಾಧನೆಗೈದ 45 ವಿದ್ಯಾರ್ಥಿಗಳಿಗೆ ಅಭಿನಂದನಾ ಹಾಗೂ ಸನ್ಮಾನ ಕಾರ್ಯಕ್ರಮವು ಅಕ್ಟೋಬರ್ 31ರಂದು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ನಡೆಯಿತು.
ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯ ಎರಡೂ ಗ್ರೂಪ್‌ಗಳಲ್ಲಿ ಉತ್ತೀರ್ಣರಾಗಿ ಅಖಿಲ ಭಾರತ ಮಟ್ಟದಲ್ಲಿ 35ನೇ ರ‍್ಯಾಂಕ್ ಪಡೆದ ಮಹಮ್ಮದ್ ರಿಝಾನ್ ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿಎ ಗೋಪಾಲಕೃಷ್ಣ ಭಟ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸಿಎ ವೃತ್ತಿಯ ಮಹತ್ವ, ಅದರಲ್ಲಿರುವ ವಿವಿಧ ಅವಕಾಶಗಳು ಹಾಗೂ ವೃತ್ತಿಪರ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಅಗತ್ಯವಿರುವ ನಿರಂತರ ಪರಿಶ್ರಮ, ಶಿಸ್ತು ಮತ್ತು ಬದ್ಧತೆಯ ಕುರಿತು ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳು ತಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಹೊಂದಿ, ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಹಿತವಚನ ನೀಡಿದರು.
ಕಾರ್ಯಕ್ರಮದಲ್ಲಿ ಸಿದ್ಧಾಂತ್ ಫೌಂಡೇಶನ್‌ನ ಟ್ರಸ್ಟಿ ರಾಮ್ ಪ್ರಭು, ತ್ರಿಶಾ ಕ್ಲಾಸಸ್‌ನ ಶಿಕ್ಷಕ ವೃಂದ, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು, ಹೆತ್ತವರು ಉಪಸ್ಥಿತರಿದ್ದರು.