ಪ್ರಶಸ್ತಿ ಆಯ್ಕೆಗೆ ಒತ್ತಡ ಸಲ್ಲದು; ರಾಜ್ಯಾದ್ಯಂತ ಏಕರೂಪದ ನೀತಿ ಅಗತ್ಯ: ರಿಜ್ವಾನ್ ಅರ್ಷದ್

ಉಡುಪಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯು ರಾಜಕೀಯ ಅಥವಾ ಯಾವುದೇ ರೀತಿಯ ಒತ್ತಡದ ಆಧಾರದಲ್ಲಿ ನಡೆಯಬಾರದು. ಪ್ರಶಸ್ತಿಗೆ ತನ್ನದೇ ಆದ ಗೌರವವಿದ್ದು, ರಾಜ್ಯದಾದ್ಯಂತ ಏಕರೂಪದ ನೀತಿ ಹಾಗೂ ಸ್ಪಷ್ಟ ಮಾನದಂಡ ರೂಪಿಸುವ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ರದ್ದುಪಡಿಸಿರುವ ವಿಚಾರವು ರಾಜ್ಯದ ಒಂದೆರಡು ಜಿಲ್ಲೆಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಯಾವ ರೀತಿಯ ನೀತಿ ಅನುಸರಿಸಬೇಕು ಎಂಬ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.

ಈ ವರ್ಷದಲ್ಲೇ ಪ್ರಶಸ್ತಿ ಆಯ್ಕೆಗೆ ಮಾನದಂಡ ರೂಪಿಸುವ ಹಾಗೂ ಸಮಿತಿ ರಚಿಸುವ ಕುರಿತು ಯೋಜನೆ ನಡೆಯುತ್ತಿದೆ. ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದರು.

ನ. 3ರಂದು ಆಸ್ಪತ್ರೆ ಕುರಿತು ಸಭೆ:

ನೂತನ ಉಡುಪಿ ಜಿಲ್ಲಾಸ್ಪತ್ರೆಯ ಉದ್ಘಾಟನೆ ವಿಳಂಬವಾಗುತ್ತಿರುವ ಕುರಿತು ನವೆಂಬರ್ 3ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ಆರೋಗ್ಯ ಸಚಿವರ ಸಮಯವನ್ನು ಈಗಾಗಲೇ ಕೋರಲಾಗಿದ್ದು, ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.

ಜಿಲ್ಲಾಸ್ಪತ್ರೆ ವಿಚಾರದ ಬಗ್ಗೆ ಆರೋಗ್ಯ ಸಚಿವರಿಗೂ ಸಂಪೂರ್ಣ ಅರಿವಿದ್ದು, ಸಭೆಯಲ್ಲಿ ಅಗತ್ಯ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ರೈತರ ಹಿತಕ್ಕಾಗಿ ಹಾಲು ದರ ಏರಿಕೆ:ಹಾಲಿನ ದರ ಏರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ರೈತರ ಬೇಡಿಕೆ ಹಾಗೂ ಅವರ ಜೀವನೋಪಾಯವನ್ನು ಪರಿಗಣಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನೊಂದಿಗೆ ಹೋಲಿಸಿದರೆ ರಾಜ್ಯದಲ್ಲಿ ಹಾಲಿನ ದರ ಕಡಿಮೆಯಾಗಿದೆ ಎಂದು ಹೇಳಿದರು.

ದರ ಹೆಚ್ಚಳ ಮಾಡದಿದ್ದರೆ ರೈತರು ಹಾಲನ್ನು ಹೊರರಾಜ್ಯಗಳಿಗೆ ಸಾಗಿಸಲು ಮುಂದಾಗುವ ಸಾಧ್ಯತೆ ಇತ್ತು. ಇದರಿಂದ ರಾಜ್ಯದಲ್ಲಿ ಹಾಲಿನ ಕೊರತೆ ಉಂಟಾಗುವ ಜತೆಗೆ ರೈತರಿಗೂ ಸೂಕ್ತ ಬೆಲೆ ದೊರೆಯುವುದಿಲ್ಲ ಎಂಬ ಅಂಶಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

‘ಖಜಾನೆ ಖಾಲಿ’ ಎಂದಿಲ್ಲ:

ರಾಜ್ಯದ ಖಜಾನೆ ಖಾಲಿಯಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಈ ರೀತಿಯ ಹೇಳಿಕೆಯನ್ನು ಎಲ್ಲಿಯೂ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಜಾಪ್ರಭುತ್ವ ಉಳಿಯಬೇಕು:

ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೈತ್ರಿಕೂಟದ ಪ್ರತಿಭಟನೆ ಕುರಿತು ಮಾತನಾಡಿದ ಸಚಿವರು, ದೇಶದಲ್ಲಿ ಪ್ರಜಾಪ್ರಭುತ್ವ ಉಳಿದುಕೊಳ್ಳುವುದು ಅತ್ಯಂತ ಮುಖ್ಯ. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆ ಉಳಿಯಬೇಕು ಎಂದರು.

ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಆಡಳಿತ ಪಕ್ಷದ ಸಹಪಾಠಿ ಅಥವಾ ಮೈತ್ರಿಕೂಟದ ಪಾಲುದಾರನಂತೆ ವರ್ತಿಸಿದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಹೇಳಿದರು.

ಇಂಡಿಯಾ ಮೈತ್ರಿಕೂಟದ ಜತೆಗೆ ಯುವಜನರು ದೆಹಲಿಯಲ್ಲಿ ದೊಡ್ಡ ಮಟ್ಟದ ಸಭೆ ನಡೆಸುತ್ತಿದ್ದಾರೆ. ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಉದ್ದೇಶದಿಂದ ರೂಪಿಸಲಾಗಿದೆ ಎಂಬ ಆತಂಕವಿದ್ದು, ಇದರ ವಿರುದ್ಧ ಹೋರಾಟ ಮುಂದುವರಿಸಲಾಗುವುದು ಎಂದರು.

ಬಾಲಿವುಡ್ ನಟರ ಬಗ್ಗೆ ಹೇಳಿದ್ದೆ:

ತಮ್ಮ ‘ನೆಚ್ಚಿನ ಸ್ಟಾರ್‌ಗಳು ಕೋಮುವಾದಿಗಳು’ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು, ತಾವು ಹೇಳಿದ್ದು ಬಾಲಿವುಡ್ ನಟರ ಕುರಿತು ಮಾತ್ರ. ಕರ್ನಾಟಕದ ನಟರು ಕೋಮುವಾದಿಗಳಲ್ಲ ಎಂದು ಹೇಳಿದರು.

ಬಾಲಿವುಡ್‌ನ ಕೆಲವು ನಟರು ಕೋಮುವಾದಿ ಧೋರಣೆಯ ರೀತಿಯಲ್ಲಿ ವರ್ತಿಸಿದ್ದು, ಅಂತಹ ಆಶಯವುಳ್ಳ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈ ವಿಚಾರವನ್ನು ಹಿಂದಿನ ದಿನದ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದೇನೆ ಎಂದು ರಿಜ್ವಾನ್ ಅರ್ಷದ್ ತಿಳಿಸಿದರು.