ಬ್ರಹ್ಮಾವರ: ಆಹಾರ ಉದ್ಯಮಕ್ಕೆ ಉತ್ತೇಜನ ನೀಡುವ ಹಾಗೂ ಸ್ಥಳೀಯ ಉದ್ಯಮಿಗಳಿಗೆ ಹೊಸ ಮಾರುಕಟ್ಟೆ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ‘ಉಡುಪಿ ಆಹಾರ ಬಿಸಿನೆಸ್ ಎಕ್ಸ್ಪೋ-2026’ ಅನ್ನು ನವೆಂಬರ್ 27ರಿಂದ 29ರವರೆಗೆ ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ.
ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಹಾಗೂ ಮಾರಾಟಗಾರರ ಸಂಘ (ರಿ.), ಬ್ರಹ್ಮಾವರ ಇದರ ವತಿಯಿಂದ ನಡೆಯುವ ಈ ಮೂರು ದಿನಗಳ ಮೇಳದಲ್ಲಿ 200ಕ್ಕೂ ಅಧಿಕ ಮಳಿಗೆಗಳನ್ನು ತೆರೆಯುವ ನಿರೀಕ್ಷೆಯಿದೆ. ಬಿ2ಬಿ (B2B) ಮತ್ತು ಬಿ2ಸಿ (B2C) ಮಾದರಿಯಲ್ಲಿ ನಡೆಯಲಿರುವ ಎಕ್ಸ್ಪೋಗೆ ಒಂದು ಲಕ್ಷಕ್ಕೂ ಅಧಿಕ ಸಂದರ್ಶಕರು ಭೇಟಿ ನೀಡುವ ನಿರೀಕ್ಷೆಯಿದೆ.
ಆಹಾರ ಉದ್ಯಮಕ್ಕೆ ಹೊಸ ಅವಕಾಶಗಳು
ಉಡುಪಿ ಹಾಗೂ ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ತಿನಿಸುಗಳನ್ನು ದೇಶದ ವಿವಿಧ ಭಾಗಗಳಿಗೆ ಪರಿಚಯಿಸುವುದು ಈ ಮೇಳದ ಪ್ರಮುಖ ಉದ್ದೇಶವಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾವಂತ ಯುವಕ-ಯುವತಿಯರಿಗೆ ಉದ್ಯಮ ಆರಂಭಿಸುವ ಮೂಲಕ ಉದ್ಯೋಗ ಸೃಷ್ಟಿಸಲು ಪ್ರೋತ್ಸಾಹ ನೀಡುವುದು ಹಾಗೂ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಮತ್ತು ಉತ್ತಮ ಬೆಲೆ ಒದಗಿಸುವ ನಿಟ್ಟಿನಲ್ಲಿ ಮೇಳ ವೇದಿಕೆಯಾಗಲಿದೆ.
ಮೇಳದಲ್ಲಿ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ, ಆಹಾರ ಉದ್ಯಮಕ್ಕೆ ಸಂಬಂಧಿಸಿದ ಆಧುನಿಕ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಹೋಟೆಲ್, ಕೆಫೆ, ಕ್ಯಾಟರಿಂಗ್, ಬೇಕರಿ ಮತ್ತು ಆಹಾರ ತಯಾರಿಕಾ ಘಟಕಗಳ ಅಭಿವೃದ್ಧಿಗೆ ಪೂರಕವಾದ ಮಾಹಿತಿ ಹಾಗೂ ಉದ್ಯಮಾವಕಾಶಗಳನ್ನು ಪರಿಚಯಿಸಲಾಗುತ್ತದೆ.
ಇದರೊಂದಿಗೆ ವಿದ್ಯಾರ್ಥಿಗಳಿಗೆ ಆಹಾರ ಉದ್ಯಮದ ಪ್ರಾಯೋಗಿಕ ಜ್ಞಾನ ಒದಗಿಸುವುದರ ಜತೆಗೆ ಉದ್ಯಮಶೀಲತೆಯ ಬಗ್ಗೆ ಆಸಕ್ತಿ ಮೂಡಿಸಲು ವಿಶೇಷ ಅವಕಾಶ ಕಲ್ಪಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
- 9741761153
- 9986543841
- 7483085187
- 9480676757















